ADVERTISEMENT

ಮಹಿಳಾ ಆತ್ಮರಕ್ಷಣಾ ತರಬೇತಿಗೆ 12 ಪೊಲೀಸ್ ಶಾಲೆ ಬಳಕೆ: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 8:53 IST
Last Updated 6 ಫೆಬ್ರುವರಿ 2022, 8:53 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಮಹಿಳಾ ಆತ್ಮರಕ್ಷಣಾ ತರಬೇತಿಗೆ 12 ಪೊಲೀಸ್ ತರಬೇತಿ ಶಾಲೆಗಳನ್ನು ಬಳಕೆ ಮಾಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಭಾನುವಾರ ಆಯೋಜಿಸಿದ್ದ ಓಬವ್ವ ಆತ್ಮರಕ್ಷಣಾ ಕಲೆಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ 50 ಸಾವಿರ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ತರಬೇತಿ ನೀಡಲು ಉದ್ದೇಶಿಸಲಾಗಿದೆ’ ಎಂದರು.

‘ಕಾನೂನು, ಶಿಕ್ಷಣ, ಗೃಹ ಇಲಾಖೆಗಳು, ಸಮಾಜ, ಸರ್ಕಾರ ಒಗ್ಗಟ್ಟಾಗಿ ನಿಂತು ಮಹಿಳೆಯರ ಆತ್ಮರಕ್ಷಣೆಯ ಜೊತೆಗೆ ಗೌರವ ರಕ್ಷಣೆಯನ್ನೂ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆಗೆ ಪ್ರಾಮುಖ್ಯತೆ ನೀಡಿ, ಕರ್ನಾಟಕ ವಸತಿ ಶಾಲೆಗಳ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವರ್ಷವಿಡೀ ಈ ಕಾರ್ಯಕ್ರಮ ನಡೆಸಬೇಕು. ಈ ಎಲ್ಲ ಕಾರ್ಯಕ್ರಮಗಳನ್ನು ಕ್ರೋಡೀಕರಿಸಿ ವಿನೂತನ ಯೋಜನೆ ಜಾರಿಗೆ ತರಲಾಗುವುದು’ ಎಂದರು.

ADVERTISEMENT

ನೀವು ಪಡೆಯುವ ತರಬೇತಿ ಆತ್ಮ ವಿಶ್ವಾಸ ಎಂಬ ಮೂಲ ಗುಣಧರ್ಮ ಇಟ್ಟುಕೊಂಡು ಆತ್ಮರಕ್ಷಣೆಗೆ ಒಂದು ರೀತಿಯಲ್ಲಿ ಟಾನಿಕ್ ಇದ್ದಂತೆ. ಎದುರಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲೆ ಎನ್ನುವ ಶಕ್ತಿ ತುಂಬುವ ಟಾನಿಕ್ ಇದ್ದಂತೆ. ಸಮಾಜ ಕಲ್ಯಾಣ ಸಚಿವರು ಹಾಗೂ ಅಧಿಕಾರಿಗಳು ನಿಮಗೆ ಈ ಟಾನಿಕ್ ನೀಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಸರಿನಲ್ಲಿಯೇ ಶಕ್ತಿ ತುಂಬಲು ಒನಕೆ ಓಬವ್ವನ ಹೆಸರಿಡಲಾಗಿದೆಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಖ್ಯಮಂತ್ರಿ ಹೇಳಿದರು.

ಓಬವ್ವ ಅಂದರೆ ಶಕ್ತಿಯ ಪ್ರತೀಕ. ಕನ್ನಡ ನಾಡು ಇಂಥ ಶಕ್ತಿಯನ್ನು ಒಳಗೊಂಡಿರುವ ನಾಡು. ಕಿತ್ತೂರು ಚನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಒನಕೆ ಓಬವ್ವ ಅವರೆಲ್ಲರೂ ಪುರುಷರನ್ನೂ ಮೀರಿಸುವ ಶೌರ್ಯ ಹೊಂದಿದ್ದರು. ನಮ್ಮೆಲ್ಲರಿಗೂ ಬಹಳ ದೊಡ್ಡ ಸ್ಫೂರ್ತಿ ಮತ್ತು ಪ್ರೇರಣೆ. ಆರ್ಥಿಕ ಅಭಿವೃದ್ಧಿ ಎಷ್ಟು ಮುಖ್ಯವೋ, ಸ್ಪೂರ್ತಿಯೂ ಅಷ್ಟೇ ಮುಖ್ಯ. ಯಾವ ದೇಶಕ್ಕೆ ಉತ್ತಮ ಇತಿಹಾಸವಿದೆಯೋ ಆ ದೇಶದ ಭವಿಷ್ಯವೂ ಉತ್ತಮವಾಗಿರುತ್ತದೆ ಎನ್ನುವ ಮಾತಿದೆ. ನಮ್ಮ ನೆಲ, ಕನ್ನಡಿಗರ ಅಸ್ಮಿತೆಯನ್ನು ಮತ್ತೊಮ್ಮೆ ಮರುಕಳಿಸಿ, ಇಂದಿನ ಪೀಳಿಗೆಗೆ ಪ್ರೇರಣೆ ನೀಡುವ ಕೆಲಸವಾಗುತ್ತಿದೆ. ಆರು ತಿಂಗಳಲ್ಲಿ ದಾಖಲೆ ಎನಿಸುವ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆಎಂದರು.

ಕರ್ನಾಟಕಕ್ಕೆ ಅಗ್ರಸ್ಥಾನ: ನಮ್ಮ ರಾಜ್ಯ 75ನೇ ರಾಜ್ಯೋತ್ಸವನ್ನು ಆಚರಿಸುವಾಗ ದೇಶದಲ್ಲಿ ರಾಜ್ಯಕ್ಕೆ ಅಗ್ರಮಾನ್ಯ ಸ್ಥಾನವಿರಬೇಕು. ಅದಕ್ಕೆ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿದರೆ ಸಾಲದು. ನಮ್ಮ ನಾಡಿನ ಪ್ರತಿಯೊಬ್ಬ ನಾಗರಿಕನಿಗೂ ವಿದ್ಯೆ, ಕೈಯಲ್ಲಿ ಕೆಲಸ, ಪ್ರೇರಣೆ ನೀಡುವ ಕೆಲಸ ಮಾಡಲು ಅವಕಾಶಗಳನ್ನು ಸರ್ಕಾರ ಮಾಡಿಕೊಡಲಿದೆ. ಐತಿಹಾಸಿಕ ಪುರುಷರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆಎಂದರು.

ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ 7,500 ಹೊಸ ಕೆಡೆಟ್‌ಗಳನ್ನು ಎನ್‌ಸಿಸಿಗೆ ಸೇರಿಲು ತಲಾ ₹ 12 ಸಾವಿರ ಅನುದಾನ ನೀಡಲಾಗಿದೆ. 75 ಹೊಸ ಘಟಕಗಳನ್ನು ಶಾಲಾ ಕಾಲೇಜುಗಳಲ್ಲಿ ತೆರೆಯಲು ತೀರ್ಮಾನಿಸಲಾಗಿದೆ. 44 ಸಾವಿರ ಎನ್‌ಸಿಸಿ ಕೆಡೆಟ್‌ಗಳಿಗೆ ತರಬೇತಿಗೆ ಅನುಮತಿ ಕೋರಲಾಗಿದೆ. 2023ನೇ ಸಾಲಿನಲ್ಲಿ ಒಟ್ಟು 50 ಸಾವಿರಕ್ಕಿಂತ ಹೆಚ್ಚು ಕೆಡೆಟ್‌ಗಳನ್ನು ಎನ್‌ಸಿಸಿಗೆ ಸೇರ್ಪಡೆ ಮಾಡಲಾಗುವುದು. ಮಿಲಿಟರಿಗೆ ಸಮಾನವಾದ ತರಬೇತಿಯ ಜೊತೆಗೆ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.