ADVERTISEMENT

ಸಂಭ್ರಮವಿಲ್ಲದ 100 ದಿನ: ಬಿಜೆಪಿಯ ಹರ್ಷ ಕಿತ್ತುಕೊಂಡ ಉಪಚುನಾವಣೆ ಸೋಲು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 22:00 IST
Last Updated 3 ನವೆಂಬರ್ 2021, 22:00 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಗುರುವಾರಕ್ಕೆ ನೂರನೇ ದಿನಕ್ಕೆ ಕಾಲಿರಿಸಿದೆ. ಆದರೆ, ಮುಖ್ಯಮಂತ್ರಿಯವರ ಸ್ವಂತ ಜಿಲ್ಲೆ ಹಾವೇರಿಯ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲು ‘ಶತದಿನೋತ್ಸವ’ದ ಸಂಭ್ರಮವನ್ನೇ ಕಸಿದುಕೊಂಡಿದೆ.

ಬಿ.ಎಸ್‌.ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಹುದ್ದೆಗೆ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆಮಾಡುವ ನಿರ್ಧಾರವನ್ನು ಜುಲೈ 26ರಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಮರುದಿನವೇ (ಜುಲೈ 27) ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿರುವ ಹೊತ್ತಿನಲ್ಲೇ ಸವಾಲುಗಳೂ ಹೆಚ್ಚತೊಡಗಿವೆ.

ಬಸವರಾಜ ಬೊಮ್ಮಾಯಿ ಗೃಹಸಚಿವರಾಗಿದ್ದ ಅವಧಿಯಲ್ಲಿ ಬಂಧಿತನಾಗಿದ್ದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಭಾಗಿಯಾಗಿರುವ ಬಿಟ್‌ ಕಾಯಿನ್‌ ಹ್ಯಾಕಿಂಗ್‌ ಹಗರಣ ಈಗ ಜೋರಾಗಿ ಸದ್ದು ಮಾಡುತ್ತಿದೆ. ಬೆಂಗಳೂರು ನಗರ ಸಿಸಿಬಿ ಪೊಲೀಸರು ಮತ್ತು ಸಿಐಡಿ ಸೈಬರ್‌ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಿದ್ದ ಪ್ರಕರಣ ಈಗ ಕೇಂದ್ರ ಸರ್ಕಾರದ ಸಿಬಿಐನ ಇಂಟರ್‌ಪೋಲ್‌ ಘಟಕ ಮತ್ತು ಜಾರಿ ನಿರ್ದೇಶನಾಲಯದ ಅಂಗಳಕ್ಕೆ ತಲುಪಿದೆ.

ADVERTISEMENT

ಈ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌, ಸರ್ಕಾರದ ವಿರುದ್ಧ ವಾಗ್ದಾಳಿಗೆ ಇಳಿದಿದೆ. ಬಿಟ್‌ ಕಾಯಿನ್‌ ಪ್ರಕರಣದ ಕುರಿತು ಹರಿದಾಡುತ್ತಿರುವ ಸುದ್ದಿಗಳನ್ನೇ ದಾಳವಾಗಿ ಬಳಸಿಕೊಂಡು ವಾಕ್‌ಪ್ರಹಾರ ನಡೆಸುತ್ತಿರುವ ಕಾಂಗ್ರೆಸ್‌ ನಾಯಕರು, ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ಯತ್ನಿಸುತ್ತಿದ್ದಾರೆ. ನೂರು ದಿನದ ಸಂಭ್ರಮದ ಸಮಯದಲ್ಲೇ ಬಿಟ್‌ ಕಾಯಿನ್‌ ಪ್ರಕರಣ ಸರ್ಕಾರದ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ನ.6ಕ್ಕೆ ಸಿಎಂ ದೆಹಲಿಗೆ

ಸರ್ಕಾರ ನೂರು ದಿನ ಪೂರೈಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ 6ರಂದು ದೆಹಲಿಗೆ ತೆರಳುತ್ತಿದ್ದಾರೆ. ಇದೇ 7 ರಿಂದ ನಡೆಯುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವ ಅವರು, ಉಪ ಚುನಾವಣೆಯ ಫಲಿತಾಂಶದ ಕುರಿತು ಪಕ್ಷದ ವರಿಷ್ಠರಿಗೆ ವರದಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೊಮ್ಮಾಯಿ ದಿಟ್ಟ ನಿರ್ಧಾರಗಳು

* ರೈತರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನಕ್ಕೆ ₹ 1,000 ಕೋಟಿ ಮಂಜೂರು

* ಸಾಮಾಜಿಕ ಭದ್ರತಾ ಪಿಂಚಣಿಗಳ ಮೊತ್ತ ಹೆಚ್ಚಳ

* ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ

* ಕಡತ ವಿಲೇವಾರಿ ಚುರುಕಿಗೆ ಸೂಚನೆ; ಆಡಳಿತ ವೆಚ್ಚ ಕಡಿತಕ್ಕೂ ನಿರ್ದೇಶನ

* ತಡೆರಹಿತ ಸಂಚಾರ (ಝೀರೋ ಟ್ರಾಫಿಕ್‌) ಸೌಲಭ್ಯ ಬೇಡವೆಂದ ಸಿಎಂ

* ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಹಾರ, ತುರಾಯಿ ಬದಲಿಗೆ ಕನ್ನಡ ಪುಸ್ತಕಗಳನ್ನು ನೀಡಲು ಆದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.