ADVERTISEMENT

ಪೌರ ಕಾರ್ಮಿಕರ ಭರ್ತಿಗೆ ಸಿ.ಎಂ ಸೂಚನೆ

ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ * ನೈರ್ಮಲ್ಯ ಕಾಪಾಡಲು ಅಧಿಕಾರಿಗಳಿಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 21:11 IST
Last Updated 5 ಜೂನ್ 2020, 21:11 IST
ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಚಿವರಾದ ಬೈರತಿ ಬಸವರಾಜ್‌, ನಾರಾಯಣಗೌಡ ಇದ್ದರು
ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಚಿವರಾದ ಬೈರತಿ ಬಸವರಾಜ್‌, ನಾರಾಯಣಗೌಡ ಇದ್ದರು   

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿಯಡಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ನಿವೃತ್ತಿ, ಮರಣ ಅಥವಾ ಇತರ ಕಾರಣಗಳಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಪ್ರಸ್ತಾವ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು,‌‌‌‌ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೇಂದ್ರ ನೆರವಿನ ‘ಅಮೃತ್’ ಯೋಜನೆಯಡಿ ಕೇಂದ್ರದ ಪಾಲಿನ ಬಾಕಿ ಅನುದಾನ ಪಡೆಯಲು ರಾಜ್ಯದ ಪಾಲಿನ ಭಾಗವಾಗಿ ₹ 209 ಕೋಟಿ ಬಿಡುಗಡೆ ಮಾಡಬೇಕು ಎಂದು ಹೇಳಿದರು.

ADVERTISEMENT

ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಬಳಿ ₹47.24 ಕೋಟಿ ಲಭ್ಯವಿದೆ. ಏಪ್ರಿಲ್ ಅಂತ್ಯದವರೆಗೆ 12 ನಗರಗಳಲ್ಲಿ ಖಾಸಗಿ ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಮುಂದಿನ ಎರಡು ತಿಂಗಳಲ್ಲಿ 23 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಜನರು ಕುಡಿಯುವ ನೀರಿಗಾಗಿ ಪರದಾಡಬಾರದು ಎಂದು ಹೇಳಿದರು.

ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.