ADVERTISEMENT

ಸರ್ಕಾರಿ ನೌಕರರ ವಿರುದ್ದದ ಅನಾಮಧೇಯ ದೂರು ಏಕಾಏಕಿ ವಿಚಾರಣೆಗೆ ಕಡಿವಾಣ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 8:18 IST
Last Updated 24 ಫೆಬ್ರುವರಿ 2021, 8:18 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ರಾಜ್ಯ ಸರ್ಕಾರಿ ಅಧಿಕಾರಿ, ನೌಕರರು ಮುಕ್ತ ಮತ್ತು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಕಾನೂನಿನ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರಿ ನೌಕರರ ವಿರುದ್ದ ಅನಾಮಧೇಯ ದೂರುಗಳನ್ನು ತನಿಖೆಗೆ ಏಕಾಏಕಿ ಒಳಪಡಿಸದಿರಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಸರ್ಕಾರದ ನೌಕರರ ವಿರುದ್ಧದ ಅನಾಮಧೇಯ ದೂರುಗಳು ಹೆಚ್ಚಾದ ಕಾರಣ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರಿಗೆ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.

ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ತನಿಖೆಗೆ, ವಿಚಾರಣೆಗೆ ಪರಿಗಣಿಸುವುದು ಎಂಬುದನ್ನು ಮಾರ್ಪಡಿಸಿ, ದೂರು ನೀಡಿರುವ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಖಚಿತಪಡಿಸಿಕೊಂಡು ಅರ್ಜಿದಾರ, ದೂರುದಾರರು ಆಗತ್ಯ ಪೂರಕ ದಾಖಲೆಗಳನ್ನು ಒದಗಿಸಿದ ಬಳಿಕ, ಆರೋಪ ಮೇಲ್ನೋಟಕ್ಕೆ ಸರಿ ಎಂದು ಕಂಡುಬಂದರೆ ಮಾತ್ರ ಅಂಥ ದೂರು ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸುವುದಾಗಿ ಆದೇಶ ಹೊರಡಿಸುವಂತೆ ‌ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.

ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರು ಮುಕ್ತ ಮತ್ತು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಕಾನೂನಿನ ದುರುಪಯೋಗ ತಡೆಗಟ್ಟುವ ದೃಷ್ಟಿಯಿಂದ ಸೂಕ್ತ ಆದೇಶ ಹೊರಡಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಅನಾಮಧೇಯ ದೂರುಗಳನ್ನು ತನಿಖೆಗೆ ಒಳಪಡಿಸದಿರಲು ಕೇಂದ್ರ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ 2019ರಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನು ಅನೇಕರು ದುರುಪಯೋಗಪಡಿಸಿಕೊಂಡು ನಕಲಿ ಹೆಸರು ಮತ್ತು ನಕಲಿ ವಿಳಾಸವನ್ನು ಬಳಸಿಕೊಂಡು ಬೇನಾಮಿ ದೂರುಗಳನ್ನು ನೀಡುತ್ತಿದ್ದಾರೆ. ಇದರಿಂದ ಅನಗತ್ಯವಾಗಿ ವಿಚಾರಣೆಗೆ ಒಳಪಡಿಸುವುದರಿಂದ ಅಧಿಕಾರಿ, ನೌಕರರಿಗೆ ದೈನಂದಿನ ಕೆಲಸಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗಿ ದಕ್ಷ ಹಾಗೂ ಪ್ರಾಮಾಣಿಕ ನೌಕರರಿಗೆ ಧಕ್ಕೆ ಉಂಟಾಗುತ್ತಿದೆ.

ಅಲ್ಲದೆ, ಆಡಳಿತಾತ್ಮಕ ಸಮಸ್ಯೆಗಳು ಉದ್ಭವವಾಗಿ ಸರ್ಕಾರಿ ಕೆಲಸ ಕಾರ್ಯಗಳು, ಯೋಜನೆಗಳು ಕುಂಠಿತವಾಗುತ್ತಿವೆ. ಇದನ್ನು ತಪ್ಪಿಸಿ ಮುಕ್ತ ಮತ್ತು ನಿರ್ಭೀತಿಯಿಂದ ಅಧಿಕಾರಿ, ನೌಕರರು ಕರ್ತವ್ಯ ನಿರ್ವಹಿಸಲು ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರಿ ನೌಕರ ಸಂಘ ಮನವಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.