ADVERTISEMENT

ರಾಜಕೀಯ ಮರೆತು ಮ್ಯೂಸಿಯಂ ಸುತ್ತಿದ ಸಿಎಂ ಬಿ.ಎಸ್. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 13:18 IST
Last Updated 29 ನವೆಂಬರ್ 2020, 13:18 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ಮುರುಘಾಶ್ರೀ ಮ್ಯೂಸಿಯಂ’ನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ವೀಕ್ಷಿಸಿದರು. ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿವಮೂರ್ತಿ ಮುರುಘಾ ಶರಣರು ಇದ್ದಾರೆ.
ಚಿತ್ರದುರ್ಗದ ಮುರುಘಾ ಮಠದಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ಮುರುಘಾಶ್ರೀ ಮ್ಯೂಸಿಯಂ’ನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ವೀಕ್ಷಿಸಿದರು. ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿವಮೂರ್ತಿ ಮುರುಘಾ ಶರಣರು ಇದ್ದಾರೆ.   

ಚಿತ್ರದುರ್ಗ: ಬಿ.ಎಸ್‌. ಯಡಿಯೂರಪ್ಪ ಅವರ ಮುಖ್ಯಮಂತ್ರಿ ಗಾದಿಗೆ ಸಂಚಾರ ಬಂದಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಬಿರುಸಿನಿಂದ ನಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆ, ಪುನರ್‌ ರಚನೆಯ ಗೊಂದಲಗಳೂ ತೇಲಿ ಬರುತ್ತಿವೆ. ಇಂತಹ ರಾಜಕೀಯ ಜಂಜಾಟಗಳ ನಡುವೆಯೂ ಯಡಿಯೂರಪ್ಪ ಸಾವಧಾನ ಚಿತ್ತದಿಂದ ಮ್ಯೂಸಿಯಂ ವೀಕ್ಷಿಸಿದವರು.

ಮುರುಘಾ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ‘ಮುರುಘಾಶ್ರೀ ಪ್ರಾಚ್ಯವಸ್ತು ಮ್ಯೂಸಿಯಂ’ ಅನ್ನು ಮುಖ್ಯಮಂತ್ರಿ ಭಾನುವಾರ ಉದ್ಘಾಟಿಸಿದರು. ಟೇಪ್‌ ಕತ್ತರಿಸಿ ಮುಂದಡಿ ಇಟ್ಟ ಯಡಿಯೂರಪ್ಪ ಅವರು ಕುತೂಹಲದಿಂದಲೇ ವಸ್ತು ಸಂಗ್ರಹಾಲಯ ಸುತ್ತಿದರು. ಅವರ ಮೊಗದಲ್ಲಿ ರಾಜಕೀಯದ ದುಗುಡ ಇಣುಕಲಿಲ್ಲ.

ಜೊತೆಯಲ್ಲೇ ಹೆಜ್ಜೆ ಹಾಕುತ್ತಿದ್ದ ಶಿವಮೂರ್ತಿ ಮುರುಘಾ ಶರಣರು ಮ್ಯೂಸಿಯಂ ಬಗ್ಗೆ ವಿವರಣೆ ನೀಡುತ್ತಿದ್ದರು. ಪ್ರತಿ ವಸ್ತುವಿನ ಹಿನ್ನೆಲೆ, ಪ್ರಾಮುಖ್ಯತೆಯನ್ನು ವಿವರಿಸುತ್ತಿದ್ದರು. ಗಮನ ಸೆಳೆದ ಪರಿಕರಗಳನ್ನು ಮುಖ್ಯಮಂತ್ರಿ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದರು. ಪ್ರವೇಶ ದ್ವಾರದ ಸಮೀಪದ ಕೆಲ ವಸ್ತುಗಳನ್ನು ಸಾಂಕೇತಿಕವಾಗಿ ವೀಕ್ಷಿಸಬಹುದು ಎಂಬ ಆಯೋಜಕರ ಊಹೆಯನ್ನು ಅವರು ಹುಸಿಗೊಳಿಸಿದರು. ತಳಮಹಡಿಯಲ್ಲಿದ್ದ ಎಲ್ಲ ವಸ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಕಲ್ಲಿನ ವಸ್ತುಗಳ ವಿಭಾಗ ಮುಖ್ಯಮಂತ್ರಿಯ ಗಮನ ಸೆಳೆಯಿತು. ಹಲವು ಶತಮಾನಗಳಷ್ಟು ಹಳೆಯದಾದ ಕಲ್ಲಿನ ಆಕೃತಿಗಳನ್ನು ತದೇಕಚಿತ್ತದಿಂದ ವೀಕ್ಷಿಸಿದರು. ನೀರು ಸಂಗ್ರಹಕ್ಕೆ ಪೂರ್ವಜರು ರೂಪಿಸಿದ್ದ ಕಲ್ಲಿನ ಬಾನಿಗಳನ್ನು ಬೆರಗಿನಿಂದ ನೋಡಿದರು. ಜೋಳ, ರಾಗಿ ಬೀಸಲು ಆನೆ ಕಟ್ಟಿ ಬಳಸುತ್ತಿದ್ದ ಬೃಹದಾಕಾರದ ಬೀಸುವ ಕಲ್ಲು ನೋಡಿ ಚಕಿತರಾದರು. ಭಾರಿ ಆಕಾರದ ಬೀಸುವ ಕಲ್ಲನ್ನು ಮುಟ್ಟಿ ನೋಡಿ ಛಾಯಾಚಿತ್ರಗಳಿಗೆ ಪೋಸು ನೀಡಿದರು.

ಕಂಚು, ಪಂಚಲೋಹಗಳಿಂದ ನಿರ್ಮಿಸಿದ ಗಣೇಶ, ಲಕ್ಷ್ಮಿ, ಸರಸ್ವತಿ ಸೇರಿದಂತೆ ನೂರಾರು ದೇವರ ವಿಗ್ರಹ ನೋಡುತ್ತ ಮುಂದೆ ಸಾಗಿದರು. ರಾಮಾಯಣ ಮತ್ತು ಮಹಾಭಾರತದ ವಿಗ್ರಹಗಳು ಅವರನ್ನು ಗತಕಾಲಕ್ಕೆ ಜಾರುವಂತೆ ಮಾಡಿದವು. ಪ್ರಾಚೀನ ಕಾಲದ ವಸ್ತುಗಳು ಅವರಿಗೆ ಹೊಸದೊಂದು ಪ್ರಪಂಚವನ್ನು ಪರಿಚಯಿಸಿದವು.

‘ಒಂದನೇ ಶತಮಾನದಿಂದ 21ನೇ ಶತಮಾನದವರೆಗಿನ ಸುಮಾರು 50 ಸಾವಿರ ವಸ್ತುಗಳು ಮ್ಯೂಸಿಯಂನಲ್ಲಿವೆ. ಅಪರೂಪದ ಕಾಷ್ಠಶಿಲ್ಪ ಕಲಾಕೃತಿ, ವಿಗ್ರಹಗಳನ್ನು ಸಂಗ್ರಹಿಸಿಡಲಾಗಿದೆ. ಭಾರತ, ರೋಮ್‌ ನಾಣ್ಯ ಹಾಗೂ ಅಂಚೆ ಚೀಟಿಗಳು ಇಲ್ಲಿವೆ. ನಾಲ್ವರು ಪೀಠಾಧಿಪತಿಗಳಿಗೆ ಸಲ್ಲಿಸಿದ ಬಿನ್ನವತ್ತಳೆ, ಬಳಸಿದ ಪೂಜಾ ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಮಾಹಿತಿ ನೀಡಿದರು.

ಹಲವು ದಶಕಗಳ ಹಿಂದಿನ ಕ್ಯಾಮೆರಾ ಸಂಗ್ರಹಗಳನ್ನು ನೋಡಿ ಮಾಹಿತಿ ಪಡೆದರು. ಕತ್ತಿ, ಗುರಾಣಿ ಸೇರಿ ಯುದ್ಧದಲ್ಲಿ ಬಳಕೆ ಮಾಡುತ್ತಿದ್ದ ಇತರ ಆಯುಧಗಳನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದರು. ಸಂಗೀತ ಪರಿಕರ, ತಾಳೆಗರಿ ಸಾಹಿತ್ಯದ ಕಟ್ಟುಗಳನ್ನು ವೀಕ್ಷಿಸಿದರು. ಪಲ್ಲಕ್ಕಿಯ ಸಮೀಪದಲ್ಲಿದ್ದ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮ್ಯೂಸಿಯಂನಿಂದ ಹೊರಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.