ADVERTISEMENT

ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ ಮಾಜಿ ಸಚಿವ ಸಿಎಂ ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 14:38 IST
Last Updated 13 ಡಿಸೆಂಬರ್ 2025, 14:38 IST
<div class="paragraphs"><p>ಸಿ.ಎಂ. ಇಬ್ರಾಹಿಂ</p></div>

ಸಿ.ಎಂ. ಇಬ್ರಾಹಿಂ

   

ಬೆಂಗಳೂರು: ‘ಹೈಕಮಾಂಡ್ ಸಂಸ್ಕೃತಿಯಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ. ನಾಡಿನ ಜನರ ಹಿತದೃಷ್ಟಿಯಿಂದ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ (ಜೆಸಿಬಿ) ಪಕ್ಷಗಳಿಗೆ ಪರ್ಯಾಯವಾಗಿ ತೃತೀಯ ರಂಗ ಉದಯವಾಗಲಿದೆ’ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು. 

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದೇ 14ರಂದು ಕಲಬುರಗಿಯಲ್ಲಿ ಆಯೋಜಿಸಿರುವ ಸಭೆಯಲ್ಲಿ ನೂತನ ಪಕ್ಷದ ಹೆಸರು ಮತ್ತು ಚಿಹ್ನೆ ನಿರ್ಧರಿಸಲಾಗುತ್ತದೆ. ರಾಜ್ಯದಲ್ಲಿ ಸಮರ್ಥ ಆಡಳಿತ ಮತ್ತು ವಿರೋಧ ಪಕ್ಷಗಳಿಲ್ಲ. ದಲಿತ ಮತ್ತು ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳುವ ಧೈರ್ಯ ಯಾವ ಪಕ್ಷಗಳಿಗೂ ಇಲ್ಲ. ಆದ್ದರಿಂದ ನಾನು ಜನರಿಗಾಗಿ ಮೂರನೇ ಶಕ್ತಿಯನ್ನು ತರಲು ಸಿದ್ಧನಾಗಿದ್ದೇನೆ’ ಎಂದು ತಿಳಿಸಿದರು. 

ADVERTISEMENT

‘ಜೆಸಿಬಿ ಪಕ್ಷಗಳ ಹಲವು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ತೃತೀಯ ರಂಗ ಸೇರಲು ನಾವು ಸಿದ್ದರಿರುವುದಾಗಿ ತಿಳಿಸಿದ್ದಾರೆ. ನಾವು ಬಸವಣ್ಣ ಮತ್ತು ಅಂಬೇಡ್ಕರ್‌ ಅವರ ಸಿದ್ಧಾಂತ ಅಡಿಯಲ್ಲಿ ಕೆಲಸ ಮಾಡುತ್ತೇವೆ. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ನಗರಸಭೆಯ ಚುನಾವಣೆಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ’ ಎಂದು ಮಾಹಿತಿ ನೀಡಿದರು. 

‘ಕಾಂಗ್ರೆಸ್ ಪಕ್ಷದೊಳಗೆ ಕುರ್ಚಿ ಕದನ ತಾರಕಕ್ಕೇರಿದ್ದು, ಸಿದ್ದರಾಮಯ್ಯ ಅವರೇ ಐದು ವರ್ಷದ ಅವಧಿಗೆ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ರಾಜ್ಯದ ಜನರು ಮತ ಹಾಕಿದ್ದಾರೆ. ಹೀಗಾಗಿ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘಂಟಾಘೋಷಾವಾಗಿ ಹೇಳಬೇಕು’ ಎಂದು ಒತ್ತಾಯಿಸಿದರು.

ಮಾರಸಂದ್ರ ಮುನಿಯಪ್ಪ, ಕರ್ನಾಟಕ ವಾಲ್ಮೀಕಿ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಯ್ಕ್, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೋಳಿ ಸಮಾಜ ಮುಖಂಡ ಮಣ್ಣೂರು ನಾಗರಾಜ್, ಬಹುಜನ ಸಂಘರ್ಷ ಸಮಿತಿಯ ರಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.