ADVERTISEMENT

ಆರ್‌ಡಿಪಿಆರ್ ಗಮನಕ್ಕೆ ತಾರದೇ 81 ಶಾಸಕರಿಗೆ ₹775 ಕೋಟಿ ಹಂಚಿದ ಸಿ.ಎಂ ಕಚೇರಿ

ಶಾಸಕರ ಓಲೈಕೆಗೆ ‘ಸುಮಾರ್ಗ’?

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 23:27 IST
Last Updated 25 ಫೆಬ್ರುವರಿ 2021, 23:27 IST
ಬಿಎಸ್‌ವೈ
ಬಿಎಸ್‌ವೈ   

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಲು ರೂಪಿಸಿರುವ ‘ಸುಮಾರ್ಗ’ ಯೋಜನೆಗೆ ಮೀಸಲಿಟ್ಟ ಅನುದಾನವನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಗಮನಕ್ಕೂ ತಾರದೇ ಮುಖ್ಯಮಂತ್ರಿ ಕಚೇರಿ ನೇರವಾಗಿ 81 ಶಾಸಕರಿಗೆ ಹಂಚಿಕೆ ಮಾಡಿರುವುದು ಬಿಜೆಪಿಯಲ್ಲೇ ಅಸಮಾಧಾನ ಹುಟ್ಟು ಹಾಕಿದೆ.

ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗದಿರುವ ಕಾರಣಕ್ಕೆ ಸಿಟ್ಟಾಗಿರುವ, ತಮ್ಮ ಮಾತಿಗೆ ಬೆಲೆಯೇ ಸಿಗುತ್ತಿಲ್ಲ ಎಂದು ಆಕ್ರೋಶಗೊಂಡಿರುವ ಶಾಸಕರನ್ನು ಓಲೈಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ದಾರಿ ಹಿಡಿದಿದ್ದಾರೆ ಎಂಬ ಚರ್ಚೆ ಬಿಜೆಪಿ ‘ಗರ್ಭಗುಡಿ’ಯಲ್ಲೇ ಶುರುವಾಗಿದೆ.

ರಾಜ್ಯದಲ್ಲಿ ಐದು ವರ್ಷಗಳ ಅವಧಿಯಲ್ಲಿ 20 ಸಾವಿರ ಕಿ.ಮೀ ಸುವ್ಯವಸ್ಥಿತ ರಸ್ತೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ ರೀತಿಯ ಮಾನದಂಡಗಳನ್ನು ರೂಪಿಸಲಾಗಿತ್ತು. 2020–21ನೇ ಸಾಲಿನ ಬಜೆಟ್‌ನಲ್ಲಿ ಮೊದಲ ಕಂತು ₹ 780 ಕೋಟಿ ಮೀಸಲಿಡಲಾಗಿತ್ತು. ಆದರೆ, ಕೋವಿಡ್‌ ಸಂಕಷ್ಟದ ಕಾರಣಗಳನ್ನು ಮುಂದಿಟ್ಟು 10 ತಿಂಗಳು ಕಳೆದರೂ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಿರಲಿಲ್ಲ. ಈಗ ಮುಖ್ಯಮಂತ್ರಿಯೇ ಖುದ್ದು ಆಸಕ್ತಿ ವಹಿಸಿ ಆದೇಶ ಹೊರಡಿಸಿ, ಹಣಕಾಸು ಇಲಾಖೆ ಮೂಲಕ ₹ 775 ಕೋಟಿಯನ್ನು 81 ಶಾಸಕರಿಗೆ ಹಂಚಿಕೆ ಮಾಡಿದ್ದಾರೆ. ಈ ಕುರಿತ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ADVERTISEMENT

ಅನುದಾನ ಸಿಗದ ಬಿಜೆಪಿ ಶಾಸಕರ ಸಿಟ್ಟು: ‘ಕೆಲವು ಜಿಲ್ಲೆಗಳಲ್ಲಿ ಬಿಜೆಪಿಯ ಹಲವು ಶಾಸಕರಿದ್ದರೂ ತಮಗೆ ಆಪ್ತರಾದ ಶಾಸಕರಿಗಷ್ಟೇ ಅನುಕೂಲ ಮಾಡಿಕೊಡಲಾಗಿದೆ. ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಉಡುಪಿ, ತುಮಕೂರು, ಕೊಪ್ಪಳ, ಹಾವೇರಿ, ರಾಮನಗರ, ಧಾರವಾಡ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಮನ್ನಣೆ ನೀಡಲಾಗಿದೆ. ಉಳಿದ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ. ವಿರೋಧ ಪಕ್ಷಗಳಿಗೆ ನೀಡಿದ ಆದ್ಯತೆಯನ್ನೂ, ಹಲವು ಸ್ವಪಕ್ಷೀಯ ಶಾಸಕರಿಗೆ ಯಡಿಯೂರಪ್ಪ ನೀಡಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬಾಕಿಯೇ ₹1,439 ಕೋಟಿ: ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಎರಡು ವರ್ಷಗಳ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಗೆ ಸರ್ಕಾರ ಕೊಡಬೇಕಿರುವ ಬಾಕಿಯೇ ₹ 1,439 ಕೋಟಿ ಇದೆ. ಹಣದ ಕೊರತೆಯ ಕಾರಣ ನೀಡಿ ಹಿಂದಿನ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳಿಗೂ ತಡೆ ನೀಡಿದೆ. ಪರಿಸ್ಥಿತಿ ಹೀಗಿದ್ದರೂ ₹ 775 ಕೋಟಿಯನ್ನು ನೇರವಾಗಿ ಹಂಚಿಕೆ ಮಾಡಲಾಗಿದೆ.

ಟೆಂಡರ್ ಇಲ್ಲದೆ ತುಂಡುಗುತ್ತಿಗೆ: ಮುಖ್ಯಮಂತ್ರಿ ಬಿಡುಗಡೆ ಮಾಡಿದ ಅಷ್ಟೂ ಮೊತ್ತಕ್ಕೂ ಟೆಂಡರ್‌ ಕರೆಯದೇ ತುಂಡು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ‘ಸುಮಾರ್ಗ’ದ ಪರಿಕಲ್ಪನೆಗೆ ವಿರುದ್ಧ
ವಾಗಿ ₹ 5 ಲಕ್ಷದ ಒಳಗೆ ಸಣ್ಣ ಸಣ್ಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂಬ ಆರೋಪವನ್ನೂ ಶಾಸಕರು ಮಾಡಿದ್ದಾರೆ.

ಬಿಜೆಪಿ ಶಾಸಕರಿಗೆ ಬಂಪರ್

ಅನುದಾನ ಪಡೆದ 81 ಶಾಸಕರಲ್ಲಿ ಬಿಜೆಪಿಯ 32 ಶಾಸಕರಿಗೆ ತಲಾ ಗರಿಷ್ಠ ₹ 23 ಕೋಟಿವರೆಗೂ ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್‌ನ 30, ಜೆಡಿಎಸ್‌ನ 18 ಹಾಗೂ ಬಿಎಸ್‌ಪಿಯ ಒಬ್ಬರು ಶಾಸಕರಿಗೆ ತಲಾ ₹ 5 ಕೋಟಿ ದೊರೆತಿದೆ. ಬಿಜೆಪಿಯೇತರ 49 ಶಾಸಕರಿಗೆ ಒಟ್ಟು ₹ 245 ಕೋಟಿ ಹಂಚಿಕೆ ಮಾಡಿದ್ದರೆ, ಬಿಜೆಪಿಯ 32 ಶಾಸಕರಿಗೆ ಒಟ್ಟು ₹ 530 ಕೋಟಿ ಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.