ADVERTISEMENT

ರಾಜ್ಯದ ಕುರಿತು ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿಗೆ ಸಿಎಂ ಸಿದ್ದು ಗುದ್ದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2025, 14:20 IST
Last Updated 27 ಡಿಸೆಂಬರ್ 2025, 14:20 IST
<div class="paragraphs"><p>ಮುಖ್ಯಮಂತ್ರಿ&nbsp;ಸಿದ್ದರಾಮಯ್ಯ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್‌</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್‌

   

ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ವಾಸ್ತವ ಸಂಗತಿಗಳ ಅರಿವಿಲ್ಲದೆ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಶನಿವಾರ ಕಿಡಿಕಾರಿದ್ದಾರೆ.

ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ನಡೆಸಲಾಗಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಿಣರಾಯಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಸರ್ಕಾರವನ್ನು ಟೀಕಿಸಿದ್ದರು. ಕಾಂಗ್ರೆಸ್‌ ಸರ್ಕಾರವು, ಮುಸ್ಲಿಂ ವಸತಿ ಪ್ರದೇಶವನ್ನು ನೆಲಸಮಗೊಳಿಸಲಾಗಿದೆ ಎಂದು ದೂರಿದ್ದರು.

ADVERTISEMENT

ಇದಕ್ಕೆ ಎಕ್ಸ್‌ ವೇದಿಕೆಯಲ್ಲೇ ತಿರುಗೇಟು ನೀಡಿರುವ ಸಿದ್ದರಾಮಯ್ಯ, 'ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಲವರು ಅತಿಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು. ಅದು ಜನ ವಸತಿಗೆ ಯೋಗ್ಯವಾದ ಸ್ಥಳವಾಗಿರಲಿಲ್ಲ. ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಅಲ್ಲಿನ ಕುಟುಂಬಗಳಿಗೆ ಹಲವು ಬಾರಿ ನೋಟೀಸ್ ನೀಡಿದ್ದರೂ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರನ್ನು ಆ ಜಾಗದಿಂದ ತೆರವುಗೊಳಿಸಲಾಗಿದೆ' ಎಂದು ಸ್ಪಷ್ಟನೆ ನೀಡಿದ್ದಾರೆ.

'ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಜೊತೆ ಮಾತನಾಡಿ, ಅವರೆಲ್ಲರಿಗೂ ತಾತ್ಕಾಲಿಕ ಆಶ್ರಯ, ಊಟ ಇನ್ನಿತರೆ ವ್ಯವಸ್ಥೆ ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ. ಅಲ್ಲಿ ಅತಿಕ್ರಮವಾಗಿ ವಾಸವಿದ್ದ ಬಹುತೇಕರು ವಲಸೆ ಕಾರ್ಮಿಕರು. ಸ್ಥಳೀಯ ನಿವಾಸಿಗಳಲ್ಲದಿದ್ದರೂ, ಮಾನವೀಯತೆ ದೃಷ್ಟಿಯಿಂದ ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಡುತ್ತೇವೆ' ಎಂದು ಭರವಸೆ ನೀಡಿದ್ದಾರೆ.

ಮುಂದುವರಿದು, 'ಬುಲ್ಡೋಜರ್ ನ್ಯಾಯಕ್ಕೂ, ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದೆ. ಪಿಣರಾಯಿ ವಿಜಯನ್ ಅವರು ವಾಸ್ತವ ಸಂಗತಿಗಳ ಅರಿವಿಲ್ಲದೆ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮೂಗು ತೂರಿಸಬೇಡಿ'
ಕರ್ನಾಟಕದ ವ್ಯವಹಾರಗಳಲ್ಲಿ ಮೂಗು ತೂರಿಸದಂತೆ ಪಿಣರಾಯಿ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಪಿಣರಾಯಿ ಮಾತನ್ನು 'ರಾಜಕೀಯ ಹೇಳಿಕೆ' ಎಂದಿರುವ ಶಿವಕುಮಾರ್, 'ಅವರು ವಾಸ್ತವಾಂಶಗಳನ್ನು ತಿಳಿಯದೆ, ನಮ್ಮ ರಾಜ್ಯದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಇವೆಲ್ಲ ಚುನಾವಣೆ ಹೊತ್ತಿನಲ್ಲಿ ಮಾಡುವ ರಾಜಕೀಯ ಗಿಮಿಕ್‌ಗಳು' ಎಂದು ಕುಟುಕಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಡಿಸಿಎಂ, 'ಕಸ ವಿಲೇವಾರಿ ಸ್ಥಳವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಅದು ಅತ್ಯಂತ ಅಪಾಯಕಾರಿ ‌ಪ್ರದೇಶವಾಗಿತ್ತು. ಅಲ್ಲಿದ್ದ ಕೊಳಗೇರಿ ನಿವಾಸಿಗಳ ಆರೋಗ್ಯಕ್ಕೂ ತೊಂದರೆಯಾಗುತ್ತಿತ್ತು' ಎಂದು ಹೇಳಿದ್ದಾರೆ.

'ನಾವು ಒತ್ತುವರಿಯಿಂದ ಭೂಮಿಯನ್ನು ರಕ್ಷಿಸಲು ಪ್ರಯತ್ನಿಸಿದ್ದೇವೆ. ರಾಜೀವ್ ಗಾಂಧಿ ಆವಾಸ್ ಯೋಜನೆಯಡಿಯಲ್ಲಿ ಅರ್ಹರಿಗೆ ಮನೆ ನೀಡಲು ಸಿದ್ಧರಿದ್ದೇವೆ. ಪ್ರಕರಣ ಸಂಬಂಧ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಕೇರಳದ ನಾಯಕರೂ ನಮ್ಮೊಂದಿಗೆ ಮಾತನಾಡಿದ್ದಾರೆ' ಎಂದಿದ್ದಾರೆ. ಹಾಗೆಯೇ, ಬುಲ್ಡೋಜರ್‌ ನ್ಯಾಯ ಕಾರ್ಯಗತಗೊಳಿಸಿಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ. 

ಪಿಣರಾಯಿ ಟ್ವೀಟ್
'ಬೆಂಗಳೂರಿನ ಫಕೀರ್‌ ಕಾಲೊನಿ ಹಾಗೂ ವಾಸೀಂ ಲೇಔಟ್‌ ಅನ್ನು ನೆಲಸಮಗೊಳಿಸುವ ಮೂಲಕ, ಹಲವು ವರ್ಷಗಳಿಂದ ಅಲ್ಲಿ  ನೆಲೆಸಿದ್ದ ಮುಸ್ಲಿಂ ಕುಟುಂಬಗಳ ನೆಲೆಯನ್ನು ನಾಶ ಮಾಡಲಾಗಿದೆ. ಇದು ಬುಲ್ಡೋಜರ್‌ ಕಾನೂನು ಸಾಮಾನ್ಯವಾಗಿ ಜಾರಿಯಾಗುತ್ತಿರುವುದನ್ನು ಎತ್ತಿತೋರಿಸುತ್ತದೆ. ದುಃಖಕರ ಸಂಗತಿಯೆಂದರೆ, ಸಂಘ ಪರಿವಾರವು ನಡೆಸುತ್ತಿರುವ ಅಲ್ಪಸಂಖ್ಯಾತರ ವಿರೋಧಿ ರಾಜಕೀಯವು ಇದೀಗ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ ಕಾರ್ಯಗತಗೊಳ್ಳುತ್ತಿದೆ. ಭಯ ಹಾಗೂ ಕ್ರೌರ್ಯದ ಬಲದೊಂದಿಗೆ ಆಡಳಿತ ನಡೆಯುವಾಗ ಸಾಂವಿಧಾನಿಕ ಮೌಲ್ಯಗಳು ಮತ್ತು ವ್ಯಕ್ತಿ ಘನತೆಯು ಮೊದಲಿಗೆ ಬಲಿಪಶುವಾಗುತ್ತವೆ. ಇಂತಹ ಕಪಟ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಎಲ್ಲ ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕು' ಎಂದು ಪಿಣರಾಯಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.