ADVERTISEMENT

ರಾಜ್ಯದಲ್ಲಿ ತೆರಿಗೆ ಸಂಗ್ರಹ: ವಾಣಿಜ್ಯ ಇಲಾಖೆಯೇ ಮೊದಲು

ಅಬಕಾರಿ, ನೋಂದಣಿ, ಗಣಿ ಇಲಾಖೆಗಳಿಗೆ ಸಿದ್ದರಾಮಯ್ಯ ತಾಕೀತು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 16:17 IST
Last Updated 3 ಡಿಸೆಂಬರ್ 2024, 16:17 IST
ತೆರಿಗೆ
ತೆರಿಗೆ   

ಬೆಂಗಳೂರು: ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ನಿಗದಿತ ಅವಧಿಯ ಒಳಗೆ ತೆರಿಗೆ ಸಂಗ್ರಹದ ಗುರಿ ಸಾಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ನಡೆದ ನಾಲ್ಕು ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ತೆರಿಗೆ ಸಂಗ್ರಹಣೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ನಿರೀಕ್ಷೆಗೂ ಮೀರಿ ಗುರಿ ಸಾಧಿಸಿದೆ. ನವೆಂಬರ್‌ ಅಂತ್ಯದವರೆಗೆ ಶೇ 94ರಷ್ಟನ್ನು ಸಾಧಿಸಿದೆ. ನಿಗದಿ ಮಾಡಲಾಗಿದ್ದ ₹56,317 ಕೋಟಿಯಲ್ಲಿ ₹53,103 ಕೋಟಿ ಸಂಗ್ರಹವಾಗಿದೆ. ಮಾರ್ಚ್‌ ಅಂತ್ಯದವರೆಗೆ ₹84,475 ಕೋಟಿ ಗುರಿ ನೀಡಲಾಗಿದೆ. ಉಳಿದ ಇಲಾಖೆಗಳು ಅದೇ ಮಾದರಿಯಲ್ಲಿ ಸಾಗಬೇಕು ಎಂದರು.

ADVERTISEMENT

2023-24ರಲ್ಲಿ ಒಟ್ಟು ತೆರಿಗೆ ಸಂಗ್ರಹಣೆ ₹70,575 ಕೋಟಿ ಇತ್ತು. ಈ ಬಾರಿ ಉತ್ತಮ ಸಾಧನೆ ಮಾಡಿದ್ದರೂ, ತೆರಿಗೆ ಸೋರಿಕೆ ಪತ್ತೆ ಹಚ್ಚಿ ತೆರಿಗೆ ಸಂಗ್ರಹವನ್ನು ಇನ್ನಷ್ಟು ಹೆಚ್ಚಿಸಬೇಕು. ಬೆಂಗಳೂರು ವಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಮಲೆನಾಡು ಮತ್ತು ಮೈಸೂರು ವಿಭಾಗದಲ್ಲಿ ತೆರಿಗೆ ಸಂಗ್ರಹ ನಿಗದಿತ ಗುರಿಗಿಂತ ಕಡಿಮೆ ಇದೆ. ವಿಶೇಷ ಅಭಿಯಾನದ ಮೂಲಕ ಎಲ್ಲಾ ವಿಭಾಗಗಳು ಮುಂದಿನ ನಾಲ್ಕು ತಿಂಗಳಲ್ಲಿ ಕಡ್ಡಾಯವಾಗಿ ಗುರಿ ಸಾಧಿಸಬೇಕು ಎಂದು ತಾಕೀತು ಮಾಡಿದರು.

ಜಿಎಸ್‌ಟಿ ಸಂಗ್ರಹವನ್ನೂ ಹೆಚ್ಚಿಸಬೇಕು. ಲೆಕ್ಕಪರಿಶೋಧನೆ ಮತ್ತು ನ್ಯಾಯನಿರ್ಣಯದಿಂದ ಪ್ರಸ್ತುತ ಹಣಕಾಸು ಸಾಲಿನಲ್ಲಿ ₹4,671 ಕೋಟಿ ತೆರಿಗೆ ಸಂಗ್ರಹ ಗುರಿ ಇದೆ. ನವೆಂಬರ್‌ ಅಂತ್ಯದವರೆಗೆ ₹3,076.86 ಕೋಟಿ ಸಂಗ್ರಹಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ಸ್ವೀಕರಿಸಿದ ಮನವಿಗಳನ್ನು ವಿಲೇವಾರಿ ಮಾಡಿ ತೆರಿಗೆ ಸಂಗ್ರಹ ಕೈಗೊಳ್ಳಬೇಕು. ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ ಶೇ 15ರ ಬೆಳವಣಿಗೆಯ ದರ ಸಾಧಿಸಿದೆ. ನವೆಂಬರ್‌ ಅಂತ್ಯದವರೆಗೆ ₹13,722 ಕೋಟಿ ಜಿಎಸ್‌ಟಿ ಸಂಗ್ರಹಿಸಲಾಗಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಅಬಕಾರಿ ರಾಜಸ್ವ ಸಂಗ್ರಹ ಹೆಚ್ಚಿಸಲು ಜಾಗೃತ ದಳ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು. ಮುದ್ರಣ ಇಲಾಖೆಯಲ್ಲಿ ಕಾನೂನು ಬಾಹಿರ ನೋಂದಣಿಗಳಿಗೆ ಕಡಿವಾಣ ಹಾಕಿ, ರಾಜಸ್ವ ಸಂಗ್ರಹವನ್ನು ವ್ಯವಸ್ಥಿತಗೊಳಿಸಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಆಸ್ತಿಗಳನ್ನೂ ಗುರುತಿಸಿ, ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಬೇಕು. ಇ-ಖಾತಾ ನೀಡುವ ಪ್ರಕ್ರಿಯೆಯಲ್ಲಿನ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗಣಿ ರಾಜಸ್ವದಲ್ಲಿ ಕಳೆದ ವರ್ಷಕ್ಕಿಂತ ಶೇ 10ರಷ್ಟು ಹೆಚ್ಚಿನ ಬೆಳವಣಿಗೆ ದರ ಸಾಧಿಸಲಾಗಿದೆ. ಉಪ ಖನಿಜದಿಂದ ಹೆಚ್ಚುವರಿಯಾಗಿ ರಾಜಸ್ವ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಇನ್ನಷ್ಟು ಪ್ರಗತಿ ಸಾಧಿಸಬಹುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.