
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ
–ಪ್ರಜಾವಾಣಿ ಹಾಗೂ ಪಿಟಿಐ ಚಿತ್ರ
ಬೆಂಗಳೂರು: ಯುದ್ಧ ಪೀಡಿತ ಕೊಲ್ಲಿ ರಾಷ್ಟ್ರಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರು ಮತ್ತು ಇತರ ಭಾರತೀಯರಿಗೆ ಸೂಕ್ತ ರಕ್ಷಣೆ ಮತ್ತು ಸುರಕ್ಷಿತ ನೆಲೆ ಒದಗಿಸಲು ಆಯಾ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಆ ದೇಶಗಳಲ್ಲಿರುವ ಕನ್ನಡಿಗರು ಮತ್ತು ಇತರ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕ್ರಮ ತೆಗೆದುಕೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ.
ಸಿಎಂ ಸಲಹೆಗಳು...
* ಯುದ್ಧ ಪೀಡಿತ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಅಲ್ಲಿರುವ ಕನ್ನಡಿಗರು ಮತ್ತು ಇತರ ಭಾರತೀಯ ನಾಗರಿಕರ ಜತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಯೋಗ ಕ್ಷೇಮ ಕುರಿತು ನಿಗಾವಹಿಸಬೇಕು. ಸಕಾಲದಲ್ಲಿ ಅಗತ್ಯ ಮಾರ್ಗದರ್ಶನ ನೀಡಬೇಕು.
* ಭಾರತೀಯ ನಾಗರಿಕರನ್ನು ವಿಶೇಷ ವಿಮಾನಗಳ ಮೂಲಕ ಸುರಕ್ಷಿತವಾಗಿ ವಾಪಸ್ ಕರೆತರಲು ಅಥವಾ ಸ್ಥಳಾಂತರಿಸಲು ಸನ್ನದ್ಧ ಸ್ಥಿತಿಯಲ್ಲಿರಬೇಕು. ವಿದೇಶಾಂಗ, ನಾಗರಿಕ ವಿಮಾನಯಾನ ಸಚಿವಾಲಯ, ರಾಜ್ಯ ಸರ್ಕಾರಗಳು ಮತ್ತು ವಿಮಾನ ಯಾನ ಸಂಸ್ಥೆಗಳ ಮಧ್ಯೆ ಸಮನ್ವಯಕ್ಕೆ ರಾಷ್ಟ್ರೀಯ ಮಟ್ಟದ ಸಮನ್ವಯ ವ್ಯವಸ್ಥೆಯೊಂದನ್ನು ರೂಪಿಸಬೇಕು.
* ಕನ್ನಡಿಗರು ಮತ್ತು ಇತರ ಭಾರತೀಯರ ಕುಟುಂಬಗಳಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಲು, ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸಬೇಕು. ನೋಂದಣಿ, ಟ್ರ್ಯಾಕಿಂಗ್, ನೈಜ ಸಮಯದಲ್ಲಿ ಮಾಹಿತಿ ರವಾನೆ ಮಾಡಬೇಕು.
* ವಿಮಾನಗಳ ಹಾರಾಟದ ಸಮಯದ ಬಗ್ಗೆ ವಿಮಾನಯಾನ ಸಂಸ್ಥೆಗಳು ಹೊಂದಾಣಿಕೆ ಮಾಡಿಕೊಳ್ಳಬೇಕು. ಅನಗತ್ಯವಾಗಿ ಹೆಚ್ಚುವರಿ ದರ ವಿಧಿಸಬಾರದು, ಅಗತ್ಯ ಸಂದರ್ಭಗಳಲ್ಲಿ ಮಾನವೀಯ ನೆರವು ನೀಡಬೇಕು ಎಂಬ ನಿರ್ದೇಶವನ್ನು ನೀಡಬೇಕು.
ಪಶ್ಚಿಮ ಏಷ್ಯಾದಲ್ಲಿ ಭಾರತೀಯರು ಅಪಾರ ಸಂಖ್ಯೆಯಲ್ಲಿದ್ದಾರೆ. ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಇವರ ಕೊಡುಗೆ ಅಪಾರ ಮತ್ತು ಜಾಗತಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ತ್ವರಿತ, ಸಮನ್ವಯ ಮತ್ತು ಸಹಾನುಭೂತಿಯಿಂದ ಕೂಡಿದ ರಾಷ್ಟ್ರೀಯ ಸ್ಪಂದನೆಯ ಅಗತ್ಯವಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.