ADVERTISEMENT

ಬೆಂಗಳೂರಿಗೆ ₹1.15 ಲಕ್ಷ ಕೋಟಿ ಕೊಡಿ: ಹಣಕಾಸು ಆಯೋಗಕ್ಕೆ ಸಿ.ಎಂ ಒತ್ತಾಯ

ಕಲ್ಯಾಣ ಕರ್ನಾಟಕ, ಮಲೆನಾಡಿಗೆ ವಿಶೇಷ ಅನುದಾನಕ್ಕೆ ಕೋರಿಕೆ * 16ನೇ ಹಣಕಾಸು ಆಯೋಗಕ್ಕೆ ಸಿ.ಎಂ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 1:17 IST
Last Updated 14 ಜೂನ್ 2025, 1:17 IST
<div class="paragraphs"><p>ಸಿ.ಎಂ </p></div>

ಸಿ.ಎಂ

   

ಬೆಂಗಳೂರು: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ನಗರದ ಮೂಲಸೌಕರ್ಯವನ್ನು ಬಲಪಡಿಸಲು ₹1.15 ಲಕ್ಷ ಕೋಟಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಶುಕ್ರವಾರ ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಅಲ್ಲದೇ, ಕಡಿಮೆ ಆದಾಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಸಮಸ್ಯೆಯನ್ನು ಎದುರಿಸುತ್ತಿರುವ ಕಲ್ಯಾಣ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡಬೇಕಾಗಿದೆ ಎಂದು ಪ್ರತಿಪಾದಿಸಿರುವುದಾಗಿ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕಲ್ಯಾಣ ಕರ್ನಾಟಕ ಏಳು ಜಿಲ್ಲೆಗಳನ್ನು ಒಳಗೊಂಡಿದ್ದು, ಈ ಪೈಕಿ ಐದು ಜಿಲ್ಲೆಗಳ ವಾರ್ಷಿಕ ವರಮಾನವು ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಸಮಾನವಿದೆ. ಮಲೆನಾಡು ಪ್ರದೇಶಗಳಲ್ಲಿ ಪ್ರವಾಹ, ಭೂಕುಸಿತದಂತಹ ಸಮಸ್ಯೆಗಳು ತಲೆದೋರುತ್ತಿವೆ. ಆದ್ದರಿಂದ ವಿಶೇಷ ಅನುದಾನವನ್ನು ಒದಗಿಸಬೇಕೆಂದು ಒತ್ತಿ ಹೇಳಿದ್ದೇವೆ’ ಎಂದರು.

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಿದೆ. ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ 8.7ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದಿಂದ ಕೇಂದ್ರಕ್ಕೆ ₹4.5 ಲಕ್ಷ ಕೋಟಿ ತೆರಿಗೆ ಸಂದಾಯವಾಗುತ್ತಿದೆ. ರಾಜ್ಯವು ಗಣನೀಯ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದ್ದರೂ ಸಂಪನ್ಮೂಲ ಹಂಚಿಕೆಯಲ್ಲಿ ತೀವ್ರ ಅಸಮತೋಲನ ಉಂಟಾಗಿದೆ ಎಂದು ವಿವರಿಸಿದರು.

‘ಕರ್ನಾಟಕದಿಂದ ಕೇಂದ್ರಕ್ಕೆ ಸ್ವೀಕೃತವಾಗುವ ತೆರಿಗೆಯಲ್ಲಿ ಪ್ರತಿ ರೂಪಾಯಿಗೆ ಪ್ರತಿಯಾಗಿ 15 ಪೈಸೆ  ಮಾತ್ರ ರಾಜ್ಯಕ್ಕೆ ವಾಪಸ್ ಬರುತ್ತಿದೆ. 14ನೇ ಹಣಕಾಸು ಆಯೋಗದಲ್ಲಿ ನಮ್ಮ ತೆರಿಗೆ ಪಾಲು ಶೇ 4.713ರಷ್ಟಿದ್ದು, ಅದನ್ನು 15ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲು ಶೇ 3.647ಕ್ಕೆ ಇಳಿಕೆ ಮಾಡಿದ್ದರಿಂದ ತೆರಿಗೆ ಹಂಚಿಕೆ ಮೊತ್ತದಲ್ಲಿ ನಮ್ಮ ಪಾಲು ಒಟ್ಟಾರೆ ಶೇ 23ರಷ್ಟು ಇಳಿಕೆಯಾಗಿದೆ. ಐದು ವರ್ಷಗಳಲ್ಲಿ ಒಟ್ಟು ₹68,275 ಕೋಟಿ ಕಡಿಮೆ ಆಗಿದೆ. 16ನೇ ಆಯೋಗದಲ್ಲಿ ಈ ಅನ್ಯಾಯ ಮರುಕಳಿಸಬಾರದು ಎಂಬುದಾಗಿ ಹೇಳಿದ್ದೇವೆ’ ಎಂದರು.

‘ಕೇಂದ್ರ ಸರ್ಕಾರ ಸೆಸ್‌ ಮತ್ತು ಸರ್‌ಚಾರ್ಜ್‌ನಲ್ಲಿ ನಮಗೆ ಮಾತ್ರವಲ್ಲ, ಯಾವ ರಾಜ್ಯಕ್ಕೂ ಪಾಲು ಕೊಡುತ್ತಿಲ್ಲ. ರಾಜ್ಯದಿಂದ 2024–25ರಲ್ಲಿ ಒಟ್ಟು ₹5,41,709 ಕೋಟಿ ಸಂಗ್ರಹವಾಗಿದೆ. ₹8,084 ಕೋಟಿ ನಮಗೆ ನಷ್ಟವಾಗಿದೆ. ಸೆಸ್‌ ಮತ್ತು ಸರ್‌ಚಾರ್ಜ್‌ ಶೇ 5 ಮೀರಬಾರದು. ಒಂದು ವೇಳೆ ಶೇ 5 ಮೀರಿದರೆ ರಾಜ್ಯಗಳ ತೆರಿಗೆ ಹಂಚಿಕೆಯ ಪಾಲಿನಲ್ಲಿ ಶೇ 50‌ರಷ್ಟು ಹೆಚ್ಚಳ ಮಾಡಬೇಕೆಂದು ಹೇಳಿದ್ದೇವೆ’ ಎಂದರು.

‘15ನೇ ಹಣಕಾಸು ಆಯೋಗವು ರಾಜ್ಯಕ್ಕೆ ₹5,495 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಅನುದಾನವನ್ನು ಒದಗಿಸಲು ನಿರಾಕರಿಸಿತು. ಇದಲ್ಲದೇ ಬೆಂಗಳೂರಿನ ಫೆರಿಫೆರಲ್‌ ರಿಂಗ್‌ ರಸ್ತೆಗೆ ₹3,000 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ ₹3,000 ಕೋಟಿ ಶಿಫಾರಸು ಮಾಡಿತ್ತು. ಇವೆಲ್ಲ ಸೇರಿ ಒಟ್ಟು ₹11,495 ಕೋಟಿ ಒದಗಿಸಬೇಕೆಂದು  ಶಿಫಾರಸು ಮಾಡಿತ್ತು’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಸಭೆಯು ಒಂದೂ ಗಂಟೆಗೂ ಹೆಚ್ಚು ಕಾಲ ಸೌಹಾರ್ದಯುತವಾಗಿ ನಡೆದಿದ್ದು, ಆಯೋಗದ ಅಧ್ಯಕ್ಷರು ನಮ್ಮ ಸಲಹೆಗಳನ್ನು ಸ್ವೀಕರಿಸಿದ್ದಾರೆ’ ಎಂದರು.

ಆಯೋಗದ ಅಧ್ಯಕ್ಷ ಡಾ.ಅರವಿಂದ ಪನಗರಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.