ADVERTISEMENT

ಕರಾವಳಿ | ಜು.19ರವರೆಗೂ ವ್ಯಾಪಕ ಮಳೆ ಸಾಧ್ಯತೆ: 18 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 20:26 IST
Last Updated 14 ಜುಲೈ 2020, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಇದೇ 15 ಮತ್ತು 16ರಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅರಬ್ಬಿ ಸಮುದ್ರದ ಪೂರ್ವ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ.

ಕರಾವಳಿಯಲ್ಲಿ ಜು.19ರವರೆಗೂ ವ್ಯಾಪಕ ಮಳೆಯಾಗಲಿದೆ. ಈ ಭಾಗದಲ್ಲಿ ಗಂಟೆಗೆ 45ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, 2.5ರಿಂದ 3.3 ಮೀಟರ್ ಗಳಷ್ಟು ಎತ್ತರದ ಅಲೆಗಳೂ ಏಳುತ್ತಿವೆ. ಹಾಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ.

ADVERTISEMENT

ಮಳೆ, ಎಲ್ಲಿ ಎಷ್ಟು?: ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ಗರಿಷ್ಠ 7 ಸೆಂ.ಮೀ ಮಳೆಯಾಗಿದೆ. ಉಡುಪಿ 6, ಕಾರ್ಕಳ 5, ಕುಂದಾಪುರ 4, ಮೂಡುಬಿದರೆ, ಮಂಗಳೂರು, ಬೆಳ್ತಂಗಡಿ, ಕಾರವಾರ, ಶಿಕಾರಿಪುರ 3, ಭಟ್ಕಳ, ಅಂಕೋಲಾ, ಹಿರೇಕೆರೂರು, ಭಾಗಮಂಡಲ, ಹೊಸನಗರ, ತೀರ್ಥಹಳ್ಳಿ, ಶ್ರವಣಬೆಳಗೊಳ 2, ರಾಯಚೂರು, ಸೊರಬ, ಕೊಪ್ಪ ಹಾಗೂ ನಾಗಮಂಗಲದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಸಾಧಾರಣ ಮಳೆ
ಬೆಂಗಳೂರು:
ಬಳ್ಳಾರಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಚುರುಕು ಪಡೆದಿದ್ದು, ರಾಜ್ಯದ ಉಳಿದೆಡೆ ಸಾಧಾರಣವಾಗಿ ಸುರಿದಿದೆ.

ತುಂಗಭದ್ರಾ ಜಲಾಶಯಕ್ಕೆ ಕೆಲವು ದಿನಗಳಿಂದ ಹೆಚ್ಚಿನ ನೀರು ಹರಿದು ಬರುತ್ತಿದೆ. ಭದ್ರತಾ ಸಿಬ್ಬಂದಿ ಹಗ್ಗದಿಂದ ಕಟ್ಟಿ ಅದನ್ನು ಜಲಾಶಯದೊಳಕ್ಕೆ ಬಿಟ್ಟಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಚುರುಕು ಪಡೆದಿರುವ ಮಳೆ ಮಡಿಕೇರಿ, ಭಾಗಮಂಡಲ, ನಾಪೋಕ್ಲು, ತಲಕಾವೇರಿ, ಚೇರಂಬಾಣೆ ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿಯುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯಯಲ್ಲಿ ಸಾಧಾರಣ ಮಳೆ ಆಗಿದೆ. ಕೊಡಗಿನಲ್ಲಿ ಮತ್ತೆ ಮಳೆ ಚುರುಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.