ADVERTISEMENT

ಕೊಬ್ಬರಿ ಮಾರುಕಟ್ಟೆ: ಎಪಿಎಂಸಿಯಲ್ಲಿ ಸಿಬ್ಬಂದಿ ಕೊರತೆ; ಆದಾಯ ಸೋರಿಕೆ

ಡಿ.ಎಂ.ಕುರ್ಕೆ ಪ್ರಶಾಂತ
Published 19 ಮೇ 2019, 19:25 IST
Last Updated 19 ಮೇ 2019, 19:25 IST
   

ತುಮಕೂರು: ಏಷ್ಯಾದಲ್ಲಿಯೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಎಂದು ಖ್ಯಾತಿಗಳಿಸಿರುವ ಜಿಲ್ಲೆಯ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು (ಎಪಿಎಂಸಿ) ಸಿಬ್ಬಂದಿ ಕೊರತೆ ಬಾಧಿಸುತ್ತಿದೆ. ಇದರಿಂದ ಎಪಿಎಂಸಿ ಆದಾಯ ಸೋರಿಕೆ ಆಗುತ್ತಿದೆ ಎನ್ನುವ ದೂರುಗಳು ವ್ಯಾಪಕವಾಗಿವೆ.

ಕಾರ್ಯದರ್ಶಿ, ಲೆಕ್ಕಾಧಿಕಾರಿ, ಅಧೀಕ್ಷಕರು, ಆಂತರಿಕ ಲೆಕ್ಕ ಪರಿಶೋಧಕರು, ಹಿರಿಯ ಮಾರುಕಟ್ಟೆ ಮೇಲ್ವಿಚಾರಕರು, ಮಾರುಕಟ್ಟೆ ಮೇಲ್ವಿಚಾರಕರು, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ 29 ಹುದ್ದೆಗಳನ್ನು ರಾಜ್ಯ ಸರ್ಕಾರವು ಮಂಜೂರು ಮಾಡಿದೆ.

ಸದ್ಯ ಕಾರ್ಯದರ್ಶಿ, ಅಧೀಕ್ಷಕರು, ಮೂವರು ಹಿರಿಯ ಮಾರುಕಟ್ಟೆ ಮೇಲ್ವಿಚಾರಕರು, ಒಬ್ಬ ಬೆರಳಚ್ಚುಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿ ಟಿ.ಪಿ.ಗಾಯತ್ರಿ ಅವರು ಆರು ತಿಂಗಳಿನಿಂದ ರಜೆಯಲ್ಲಿಯೇ ಇದ್ದಾರೆ. ತುಮಕೂರು ಎಪಿಎಂಸಿ ಉಪನಿರ್ದೇಶಕರನ್ನೇ ಪ್ರಭಾರವಾಗಿ ನೇಮಿಸಲಾಗಿದೆ. ಒಬ್ಬ ಹಿರಿಯ ಮಾರುಕಟ್ಟೆ ಮೇಲ್ವಿಚಾರಕರನ್ನು ತುರುವೇಕೆರೆ ಎಪಿಎಂಸಿಗೂ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಹೀಗೆ ಅತ್ಯಂತ ದೊಡ್ಡ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿರುವುದು ಬೆರಳೆಣಿಕೆ ಸಿಬ್ಬಂದಿ ಮಾತ್ರ!

ADVERTISEMENT

ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ ಬೇರೆ ಬೇರೆ ಭಾಗದ ಕೊಬ್ಬರಿ ತಿಪಟೂರು ಎಪಿಎಂಸಿಗೆ ಬರುತ್ತದೆ. ರಾಜ್ಯದ ಕೊಬ್ಬರಿ ಬೆಲೆ ನಿರ್ಧಾರದಲ್ಲಿ ತಿಪಟೂರು ಮಾರುಕಟ್ಟೆಯದ್ದೇ ಅಂತಿಮ ನಿರ್ಣಯ ಎನ್ನುವ ವಾತಾವರಣ ಇದೆ.

ಇಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ ಕೊಬ್ಬರಿ ಹರಾಜು ನಡೆಯುತ್ತದೆ. ಕಳೆದ ವರ್ಷ ಪ್ರತಿ ಹರಾಜಿನ ವೇಳೆ ಕನಿಷ್ಠ 20ರಿಂದ 25 ಸಾವಿರ ಚೀಲ ಕೊಬ್ಬರಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಅಧಿಕಾರಿಗಳು ಇಲ್ಲದಿರುವುದು ವರ್ತಕರಿಗೆ ಸುಗ್ಗಿ ಎನ್ನುವಂತಾಗಿದೆ. ಅನಧಿಕೃತ ವರ್ತಕರನ್ನು ಹೆಚ್ಚಿಸಿದೆ. ಎ‍ಪಿಎಂಸಿ ಪ್ರಾಂಗಣಕ್ಕೆ ಕೊಬ್ಬರಿ ಬಾರದೆ ಹೊರಭಾಗದಲ್ಲಿಯೇ ವ್ಯಾಪಾರ ನಡೆಯುತ್ತಿದೆ. ಇದರಿಂದ ಪ್ರತಿ ಹರಾಜಿನ ವೇಳೆ 5 ಸಾವಿರ ಚೀಲ ಆವಕಕ್ಕೆ ಕುಸಿದಿದೆ.

ಎಪಿಎಂಸಿ ಇರುವುದೇ ರೈತರ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ದೊರಕಿಸಿಕೊಡುವುದಕ್ಕೆ. ಆದರೆ ಎಪಿಎಂಸಿಯಲ್ಲಿ ಅಧಿಕಾರಿಗಳೇ ಇಲ್ಲ ಅಂದರೆ ರೈತರ ಸ್ಥಿತಿ ಕೇಳುವವರು ಯಾರು. ಸರ್ಕಾರವೇ ಮಾರುಕಟ್ಟೆಯನ್ನು ನಿರ್ಲಕ್ಷಿಸಿದೆ ಎಂದು ರೈತ ಸಂಘದ ಮುಖಂಡರು ಗಂಭೀರವಾಗಿ ಆಪಾದಿಸುವರು.

‘ಕೊಬ್ಬರಿಯನ್ನು ರೈತರು ಮಾರುಕಟ್ಟೆಗೆ ತಂದು ಮಾರಾಟ ಮಾಡಬೇಕು. ವರ್ತಕರು ಇಲ್ಲಿಯೇ ಕೊಬ್ಬರಿ ಖರೀದಿಸಬೇಕು ಎಂಬ ನಿಯಮ ಇದೆ. ಎಪಿಎಂಸಿ ಪ್ರಾಂಗಣದ ಹೊರಗೆ ವ್ಯಾಪಾರ ನಡೆಸಬಾರದು ಎಂದು ಕಟ್ಟುನಿಟ್ಟಾಗಿ ವರ್ತಕರಿಗೆ ಹೇಳುವ ಹಕ್ಕು ಇರುವುದು ಅಧಿಕಾರಿಗಳಿಗೆ’ ಎನ್ನುವರು ಬೆಲೆ ಕಾವಲು ಸಮಿತಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ.

‘ಹೇಳುವವರು ಕೇಳುವವರು ಇಲ್ಲದ ಕಾರಣ ವರ್ತಕರು ಹೇಳಿದ್ದೇ ಬೆಲೆ ಎನ್ನುವಂತಾಗಿದೆ. ಇದು ರೈತರನ್ನು ವಂಚಿಸುವ ಅವಕಾಶವನ್ನು ಹೆಚ್ಚಿಸಿದೆ. ಕೊಬ್ಬರಿ ಆನ್‌ಲೈನ್ ಮಾರಾಟ ವ್ಯವಸ್ಥೆ ದೇಶದಲ್ಲಿಯೇ ಮೊದಲ ಬಾರಿ ಜಾರಿಗೆ ಬಂದಿರುವುದು ಇಲ್ಲಿ. ಆದರೆ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಅಧಿಕಾರಿಗಳು ಇಲ್ಲದಿರುವುದು ಆನ್‌ಲೈನ್ ಮಾರುಕಟ್ಟೆಯನ್ನು ಹಳ್ಳ ಹಿಡಿಸಿದೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.