
ಬೆಂಗಳೂರು: ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ ಮುಂದಿನ 24 ಗಂಟೆಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಮುನ್ಸೂಚನೆ ನೀಡಿದೆ.
ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಧಾರಣಕ್ಕಿಂತಲೂ ಮೂರರಿಂದ ಆರು ಸೆಲ್ಸಿಯಸ್‌ನಷ್ಟು ಕುಸಿಯಲಿದೆ. ಹಲವೆಡೆ ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ತಿಳಿಸಿದೆ.
ವಿಜಯಪುರದಲ್ಲಿ ಕಳೆದ 24 ಗಂಟೆಗಳಲ್ಲಿ ಚಳಿ ಗಾಳಿ ವಿಪರೀತ ಇದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಏತನ್ಮಧ್ಯೆ, ಬಂಗಾಳಕೊಲ್ಲಿಯ ನೈರುತ್ಯ ಹಾಗೂ ಶ್ರೀಲಂಕಾದ ಈಶಾನ್ಯ ಕರಾವಳಿಯಲ್ಲಿ ಬೆಳಿಗ್ಗೆ ವಾಯುಭಾರ ಕುಸಿತ ಉಂಟಾಗಿದ್ದು, ಉತ್ತರ ವಾಯವ್ಯ ದಿಕ್ಕಿಗೆ ಮಾರುತಗಳು ಚಲಿಸುತ್ತಿವೆ. ಇದರಿಂದ ಕರ್ನಾಟಕದ ಮಳೆ ಮಾದರಿಯ ಮೇಲೆ ಪರಿಣಾಮವಾಗಬಹುದು ಎಂದು ಅಂದಾಜಿಸಲಾಗಿದೆ.
ಮುಂಬರುವ ದಿನಗಳಲ್ಲಿ ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಶುಷ್ಕ ವಾತಾವರಣವಿರಲಿದೆ ಎಂದೂ ಐಎಂಡಿ ಹೇಳಿದೆ.
ತುಮಕೂರು ಹಾಗೂ ಚಿಕ್ಕಮಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಲ್ಪ ಮಳೆಯಾಗಬಹುದು. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಶುಷ್ಕ ಹವಾಮಾನ ಇಲಿದೆ ಎಂಬ ಮುನ್ಸೂಚನೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.