ADVERTISEMENT

ಬನ್ನಿ, ಕೋವಿಡ್‌ ವಿರುದ್ಧ ಹೋರಾಡೋಣ: ಓದುಗರಿಗೆ ಸಂಪಾದಕರ ಸಂದೇಶ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 2:09 IST
Last Updated 22 ಮಾರ್ಚ್ 2020, 2:09 IST
   

ಪ್ರಿಯ ಓದುಗರೇ,

ಏಳು ದಶಕಗಳಿಂದಲೂ ‘ಪ್ರಜಾವಾಣಿ’ ನಿಮ್ಮೊಂದಿಗೆ ವಿಶ್ವಾಸಾರ್ಹವಾದ ಗಟ್ಟಿ ಸಂಬಂಧವನ್ನು ಬೆಳೆಸಿಕೊಂಡು ಬಂದಿದೆ. ನಿಮ್ಮ ಈ ನೆಚ್ಚಿನ ಪತ್ರಿಕೆಯು ಪ್ರತಿದಿನ ಅಂತಹ ವಿಶ್ವಾಸಾರ್ಹ ಸುದ್ದಿಗಳನ್ನು ಹೊತ್ತುಕೊಂಡೇ ಮುಂಜಾನೆ ಕಾಫಿ ವೇಳೆಗೆ ನಿಮ್ಮ ಕೈಸೇರುವುದು. ಸುಳ್ಳು ಸುದ್ದಿಗಳು ಕಾಳ್ಗಿಚ್ಚಿನಂತೆ ಹರಡುವ ಈ ಸಂದರ್ಭದಲ್ಲಿ ನಂಬಲರ್ಹ ಸುದ್ದಿಮೂಲಕ್ಕೇ ತಾನೆ ಹೆಚ್ಚಿನ ಮಹತ್ವ? ಎಲ್ಲರ ಸಮಸ್ಯೆಗಳನ್ನು ತನ್ನದೆಂದು ಭಾವಿಸಿ, ಅದಕ್ಕೆ ಪರಿಹಾರಗಳನ್ನೂ ಕಂಡುಕೊಳ್ಳುವಲ್ಲಿ ಪತ್ರಿಕೆ ಸದಾ ಪ್ರಯತ್ನಿಸುತ್ತಲೇ ಬಂದಿದೆ. ಸತ್ಯವನ್ನು ಹೇಳಲು ಎಂದಿಗೂ ಹಿಂಜರಿದಿಲ್ಲ. ಇದೆಲ್ಲವೂ ನಿಮಗೆ ಗೊತ್ತಿರುವಂಥದ್ದೆ. ಪತ್ರಿಕೆಯು ಎಂದಿಗೂ ಇದೇ ಮೌಲ್ಯಗಳ ಹಾದಿಯಲ್ಲಿಯೇ ಸಾಗುತ್ತದೆ. ಹಾಗೆಯೇ ಓದುಗರನ್ನು ತನ್ನ ಸಹಯಾತ್ರಿಕರನ್ನಾಗಿ ಕಾಣುತ್ತದೆ.

ಕರೊನಾವೈರಸ್‌ ಸೃಷ್ಟಿಸಿರುವ ಭೀತಿಯ ಈ ಸನ್ನಿವೇಶದಲ್ಲಿ ನಿಮ್ಮ ಸುರಕ್ಷತೆಗೆ ಸಾಧ್ಯವಾದ ಎಲ್ಲವನ್ನೂ ಪತ್ರಿಕೆ ಮಾಡಲಿದೆ. ಇದನ್ನೇ ವಿಸ್ತರಿಸಿ ಹೇಳುವುದಾದರೆ ನಮ್ಮ ಮುದ್ರಣಾಲಯಗಳು ಸಂಪೂರ್ಣ ಯಾಂತ್ರೀಕೃತವಾಗಿದ್ದು, ಪತ್ರಿಕೆಗಳ ಬಂಡಲ್‌ಗಳ ಮೇಲೆ ಸೋಂಕು ನಿವಾರಕವನ್ನು ಸಿಂಪಡಣೆ ಮಾಡಲಾಗುತ್ತಿದೆ. ವಿತರಕರಲ್ಲೂ ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಲಾಗಿದೆ. ಅದು ಮಹಾಪೂರವೇ ಇರಲಿ, ಬರವೇ ಆವರಿಸಿರಲಿ, ವೈರಾಣುಗಳ ದಾಳಿಯೇ ಆಗಿರಲಿ ಅದರ ಕುರಿತು ಸಮಗ್ರ ಹಾಗೂ ತಾಜಾ ಮಾಹಿತಿಯನ್ನು ಕೊಡುವುದು ಪತ್ರಿಕೆಯ ಬಹುಮುಖ್ಯ ಆದ್ಯತೆ. ಆ ಕರ್ತವ್ಯಕ್ಕೆ ಅದು ಯಾವಾಗಲೂ ಬದ್ಧ. ಕರೊನಾವೈರಸ್‌ ಕುರಿತ ಸ್ಥಳೀಯ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ಎಲ್ಲೆಡೆಯಿಂದಲೂ ಬರುವ ಮಹತ್ವದ ಸಲಹೆಗಳು ಹಾಗೂ ವಿಶ್ಲೇಷಣೆಗಳನ್ನೆಲ್ಲ ಪತ್ರಿಕೆ ನಿಮ್ಮ ಗಮನಕ್ಕೆ ತರಲಿದೆ. ಸತ್ಯಾಂಶಗಳಿಂದ ಕೂಡಿದ, ಸಮರ್ಪಕವಾದ ಹಾಗೂ ಆಯಾ ಕ್ಷಣದ ಎಲ್ಲ ಮಹತ್ವದ ಮಾಹಿತಿಯನ್ನು ನಿಮಗಾಗಿ ಹೊತ್ತು ತರಲಿದೆ.

ADVERTISEMENT

ಮುದ್ರಣಾಲಯವೊಂದರ ಕಾರ್ಯಾಚರಣೆಯ ವಿಡಿಯೊವನ್ನು ನೋಡಲು ‘ಪ್ರಜಾವಾಣಿ’ ಪತ್ರಿಕೆಯಲ್ಲಿರುವಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಈ ಕೆಳಗಿನ ವಿಡಿಯೋವನ್ನು ಪತ್ರಿಕೆಯ ಮೂಲಕವೂ ನೋಡಬಹುದು.

ಕೋವಿಡ್‌–19 ಕುರಿತ ಕ್ಷಣ–ಕ್ಷಣದ ಮಾಹಿತಿಗಾಗಿ www.prajavani.net ನೋಡಿ. ತಾಜಾ ಸೂಚನೆಗಳಿಗಾಗಿ ಟೆಲಿಗ್ರಾಂನಲ್ಲಿ ಸಂಪರ್ಕದಲ್ಲಿರಿ http://bit.ly/prajavani

ನೀವು ಸುರಕ್ಷಿತವಾಗಿರಿ, ಸತತ ಸಂಪರ್ಕದಲ್ಲಿರಿ. ನಿಮ್ಮ ಸೇವೆಯನ್ನು ಇನ್ನೂ ಉತ್ತಮವಾಗಿ ಹೇಗೆ ಮಾಡಬಹುದು ಎಂಬುದನ್ನೂ ತಿಳಿಸಿರಿ. ನಿಮ್ಮೊಂದಿಗಿನ ವಿಶ್ವಾಸಾರ್ಹ ಪಯಣಕ್ಕೆ ಚ್ಯುತಿ ಉಂಟಾಗದಂತೆ ಪತ್ರಿಕೆ ಎಚ್ಚರಿಕೆ ವಹಿಸಲಿದೆ.

ಬನ್ನಿ, ಕೋವಿಡ್‌–19 ವಿರುದ್ಧ ಜತೆಯಾಗಿ ಹೋರಾಡೋಣ
–ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.