ADVERTISEMENT

ಕಾಮೆಡ್ -ಕೆ: ಆರಂಭದಲ್ಲೇ ಪೂರ್ಣ ಶುಲ್ಕ ಭರ್ತಿ

ಸೀಟ್ ಬ್ಲಾಕಿಂಗ್ ಉಪಟಳಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 18:36 IST
Last Updated 12 ನವೆಂಬರ್ 2021, 18:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅನುದಾನರಹಿತಖಾಸಗಿ ಕಾಲೇಜುಗಳ ಎಂಜಿನಿಯರಿಂಗ್‌ ಸೀಟು ಹಂಚಿಕೆಯಲ್ಲಿ ನಡೆಯುತ್ತಿದ್ದ ‘ಸೀಟ್‌ ಬ್ಲಾಕಿಂಗ್‌’ ಉಪಟಳಕ್ಕೆ ತೆರೆ ಎಳೆಯಲು ಮುಂದಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ), ಪ್ರಸಕ್ತ ಶೈಕ್ಷಣಿಕ ಸಾಲಿನಿಂದ, ಕೌನ್ಸೆಲಿಂಗ್‌ ಸಮಯದಲ್ಲೇ ಸಂಪೂರ್ಣ ಶುಲ್ಕ ಭರ್ತಿ ಮಾಡಿಸಿಕೊಳ್ಳುವ ಪರಿಪಾಟಕ್ಕೆ ನಾಂದಿ ಹಾಡಲಿದೆ.

‘ಪ್ರವೇಶ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥರಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಮನೋಹರ್ ಸಮಿತಿಯ ಸಲಹೆಯ ಮೇರೆಗೆ ಕೆಇಎ ಈ ಕ್ರಮಕ್ಕೆ ಮುಂದಾಗಿದೆ’ ಎಂದು ಕಾಮೆಡ್‌–ಕೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕೌನ್ಸೆಲಿಂಗ್ ಸಮಯದಲ್ಲಿ ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳು ಬೋಧನಾ ಶುಲ್ಕವೂ ಸೇರಿದಂತೆ ₹ 2.20 ಲಕ್ಷ ಮೊತ್ತದ ಸಂಪೂರ್ಣ ಶುಲ್ಕವನ್ನು ಆರಂಭದಲ್ಲೇ ಪಾವತಿಸಬೇಕಿದೆ. ಅಂತೆಯೇ, ವಿದ್ಯಾರ್ಥಿಗಳು ಪ್ರವೇಶ ಪಡೆದ ಬಗ್ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜೊತೆ ಕಾಮೆಡ್‌–ಕೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮನದಟ್ಟು ಮಾಡಿಕೊಳ್ಳುತ್ತಾರೆ’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ADVERTISEMENT

‘ಈಗಿರುವ ಪದ್ಧತಿಯ ಅನುಸಾರ ವಿದ್ಯಾರ್ಥಿಗಳು ತಮಗೆ ಸೀಟು ದೊರೆತಾಗ ಬೋಧನಾ ಶುಲ್ಕದಲ್ಲಿ ಭಾಗಶಃ ಅಂದರೆ, ₹ 55 ಸಾವಿರವನ್ನು ಮಾತ್ರವೇ ಪಾವತಿಸುತ್ತಿದ್ದರು. ನಂತರ ಕೌನ್ಸೆಲಿಂಗ್‌ನ ಎಲ್ಲ ಸುತ್ತುಗಳು ಮುಗಿದ ಮೇಲೆ ಸೀಟುಗಳನ್ನು ಬಿಟ್ಟುಕೊಡುತ್ತಿದ್ದರು. ಇವು ಸ್ವಾಭಾವಿಕವಾಗಿಯೇ ಆಡಳಿತ ಮಂಡಳಿಯ ಪಾಲಾಗುತ್ತಿದ್ದವು. ಇಂತಹ ಸೀಟುಗಳನ್ನು ಆಡಳಿತ ಮಂಡಳಿ ಹೆಚ್ಚಿನ ಮೊತ್ತಕ್ಕೆ ನೀಡಿ ಹಣ ಗಳಿಸುತ್ತಿದ್ದವು. ಪ್ರತಿವರ್ಷ ಏನಿಲ್ಲವೆಂದರೂ ಶೇ 15 ರಿಂದ 25ರಷ್ಟು ಸೀಟುಗಳನ್ನು ಈ ರೀತಿ ಬ್ಲಾಕ್‌ ಮಾಡಲಾಗುತ್ತಿತ್ತು’ ಎಂಬ ಆರೋಪಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.