ADVERTISEMENT

ಕೃಷಿ ಆದಾಯ ಹೆಚ್ಚಳಕ್ಕೆ ರೈತರ ಸಮಿತಿ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 21:45 IST
Last Updated 25 ಆಗಸ್ಟ್ 2021, 21:45 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದಕ್ಕೆ ಕಾರ್ಯತಂತ್ರ ರೂಪಿಸುವುದಕ್ಕೆ ಪೂರಕವಾಗಿ ರೈತರನ್ನೂ ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರೈತರ ಆದಾಯ ದ್ವಿಗುಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಅಶೋಕ್‌ ದಳವಾಯಿ ಅವರು ಮುಖ್ಯಮಂತ್ರಿಯವರನ್ನು ಬುಧವಾರ ಭೇಟಿಮಾಡಿ ತಮ್ಮ ವರದಿಯ ಮುಖ್ಯಾಂಶಗಳ ಕುರಿತು ಮಾಹಿತಿ ನೀಡಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ಕೃಷಿ ಕ್ಷೇತ್ರವು ಉತ್ಪಾದನೆಯನ್ನು ಕೇಂದ್ರೀಕರಿಸಿದೆ. ಅದನ್ನು ಆದಾಯ ಕೇಂದ್ರಿತ ಕ್ಷೇತ್ರವನ್ನಾಗಿ ಪರಿವರ್ತಿಸಬೇಕಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಜತೆ ಸೇರಿ ರಾಜ್ಯ ಸರ್ಕಾರವು ಕೆಲಸ ಮಾಡಬೇಕಿದೆ. ವರದಿಗೆ ಪೂರಕವಾಗಿ ಸರ್ಕಾರದ ಬಳಿ ಇರುವ ದತ್ತಾಂಶಗಳನ್ನು ಹಂಚಿಕೊಳ್ಳಲಾಗುವುದು’ ಎಂದರು.

ADVERTISEMENT

ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟಗಳ ನಿರ್ವಹಣೆ ಕುರಿತು ಕೃಷಿ ವಿಶ್ವವಿದ್ಯಾಲಯಗಳ ನೆರವಿನಲ್ಲಿ ಕ್ರಮ ವಹಿಸಬೇಕಿದೆ. ಅದಕ್ಕಾಗಿ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಪ್ರತ್ಯೇಕ ನಿರ್ದೇಶನಾಲಯ: ಕೃಷಿ, ತೋಟಗಾರಿಕೆ, ಡೇರಿ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ ಹಾಗೂ ಗ್ರಾಮೀಣ ಮತ್ತು ಗಡಿ ಕೈಗಾರಿಕೆಗಳ ಮೂಲಕ ರೈತರ ಆದಾಯ ಹೆಚ್ಚಿಸುವುದಕ್ಕೆ ಪೂರಕವಾಗಿ ‘ಸೆಕೆಂಡರಿ ಅಗ್ರಿಕಲ್ಚರ್‌‘ ನಿರ್ದೇಶನಾಲಯವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ, ತೋಟಗಾರಿಕಾ ಸಚಿವ ಮುನಿರತ್ನ ಮತ್ತು ಎರಡೂ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.