ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರ ನಿಯಂತ್ರಣಕ್ಕಾಗಿ ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆ’ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸುಹಾಸ್ ಶೆಟ್ಟಿ ಹತ್ಯೆಯ ನಂತರ ಕೆಲವೆಡೆ ಚೂರಿ ಇರಿತ–ದಾಳಿಯಿಂದ ಪ್ರಕ್ಷುಬ್ಧಗೊಂಡಿದ್ದ, ಉಭಯ ಜಿಲ್ಲೆಗಳಲ್ಲಿಯ ಜನಜೀವನ ಶನಿವಾರ ಸಹಜ ಸ್ಥಿತಿಗೆ ಮರಳಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ. ನಿಷೇಧಾಜ್ಞೆ ಅವಧಿ ಕಡಿತಗೊಳಿಸಿದ್ದು, ಭಾನುವಾರ (ಮೇ 4) ಬೆಳಿಗ್ಗೆ 6ಕ್ಕೆ ಮುಕ್ತಾಯವಾಗಲಿದೆ.
ಗುಂಪು ಹಲ್ಲೆಯಿಂದ ಕೇರಳದ ಮೊಹಮ್ಮದ್ ಅಶ್ರಫ್ ಹತ್ಯೆ, ಹಿಂದುತ್ವ ಕಾರ್ಯಕರ್ತ–ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯ ನಂತರ ಇಲ್ಲಿನ ಕೋಮು ಸೂಕ್ಷ್ಮ ಪರಿಸ್ಥಿತಿಯನ್ನು ಅವಲೋಕಿಸಲು ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಜೊತೆ ಶನಿವಾರ ಇಲ್ಲಿ ಸಭೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವ, ‘ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಮಾದರಿಯಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆಯನ್ನು ಪ್ರತ್ಯೇಕವಾಗಿ ರಚಿಸುತ್ತೇವೆ. ಇದು ಪೊಲೀಸರ ಸಹಯೋಗದಲ್ಲಿ ಕೆಲಸ ಮಾಡಲಿದೆ. ಐಜಿಪಿ ದರ್ಜೆಯ ಅಧಿಕಾರಿ ಇದರ ನೇತೃತ್ವ ವಹಿಸಲಿದ್ದಾರೆ. ಕೋಮು
ಚಟುವಟಿಕೆಗಳನ್ನು ನಡೆಸುವವರು ಮತ್ತು ಅದನ್ನು ಬೆಂಬಲಿಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಕಾರ್ಯಪಡೆಗೆ ನೀಡುತ್ತೇವೆ. ಎರಡು ತಿಂಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ’ ಎಂದರು.
ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಈ ಜಿಲ್ಲೆಗಳಲ್ಲಿ ಕೋಮು ಹಿಂಸೆ ಮತ್ತೆ ಮರುಕಳಿಸಿದೆ ಎಂಬ ಭಾವನೆ ಜನರಲ್ಲಿ ಬಂದಿರಬಹುದು. ಜನ ಸಮುದಾಯ ಇದನ್ನು ಇಷ್ಟ ಪಡುವುದಿಲ್ಲ. ಈ ಜಿಲ್ಲೆಗಳು ಶಾಂತಿಯಿಂದ ಇರಬೇಕು, ಜನ ಶಾಂತಿಯಿಂದ ಬದುಕಬೇಕು. ಇಲ್ಲಿ ಬಂಡವಾಳ ಹೂಡಿಕೆ ಆಗಬೇಕು. ಜನರಿಗೆ ಉದ್ಯೋಗ ಸಿಗಬೇಕು ಎಂದು ಪೊಲೀಸ್ ಇಲಾಖೆ ಮತ್ತು ಸರ್ಕಾರ ಬಯಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎರಡು ವರ್ಷಗಳಿಂದ ಎಲ್ಲ ರೀತಿಯ ಕ್ರಮ ತೆಗದುಕೊಂಡಿದ್ದೆವು. ಗುಂಪು ಹಲ್ಲೆ ನಡೆಸಿ ಕೇರಳದ ವಯನಾಡಿನ ಅಶ್ರಫ್‌ನನ್ನು ಕೊಲೆ ಮಾಡಿದ್ದು ಹಾಗೂ ಸುಹಾಸ್ ಶೆಟ್ಟಿ ಹತ್ಯೆ ಕೋಮು ಸೌಹಾರ್ದಕ್ಕೆ ಸವಾಲು ಆಗಿವೆ ಎಂದರು.
‘ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳನ್ನು ಹಾಗೂ ಅಶ್ರಫ್ ಹತ್ಯೆ ಪ್ರಕರಣದಲ್ಲಿ 21 ಆರೋಪಿಗಳನ್ನು ಬಂಧಿಸಲಾಗಿದೆ' ಎಂದರು.
ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗ್ರವಾಲ್, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಭೆಯಲ್ಲಿ ಭಾಗವಹಿಸಿದ್ದರು.
‘ಎಎನ್‌ಎಫ್ ಸಿಬ್ಬಂದಿ ಹೊಸ ಕಾರ್ಯಪಡೆಗೆ’
‘ಸದ್ಯಕ್ಕೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಇಲ್ಲ. ಹಾಗಾಗಿ ಎಎನ್ಎಫ್ ಅನ್ನು ಬರ್ಕಾಸ್ತುಗೊಳಿಸುತ್ತೇವೆ. ಅದರಲ್ಲಿರುವ ಸಿಬ್ಬಂದಿಯನ್ನು ಕೋಮು ಹಿಂಸೆ ನಿಗ್ರಹ ಕಾರ್ಯಪಡೆಗೆ ಬಳಸಿಕೊಳ್ಳುತ್ತೇವೆ. ಕೆಲ ಸಿಬ್ಬಂದಿಯನ್ನು ಬೇರೆ ಕಡೆಯಿಂದ ನೇಮಿಸುತ್ತೇವೆ’ ಎಂದು ಪರಮೇಶ್ವರ ಹೇಳಿದರು.
‘ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲ ವರ್ಷಗಳಿಂದ ಕೋಮು ಹಿಂಸಾಚಾರ ಮರುಕಳಿಸುತ್ತಿದೆ. ಅನೇಕ ಸಂದರ್ಭಗಳಲ್ಲಿ ಈ ಕಾರಣಕ್ಕಾಗಿಯೇ ಈ ಎರಡು ಜಿಲ್ಲೆಗಳು ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿವೆ. ಈ ಎರಡು ಜಿಲ್ಲೆಗಳಲ್ಲಿ ಶಾಂತಿ ಸ್ಥಾಪಿಸುವುದೇ ಈ ಕಾರ್ಯಪಡೆ ರಚನೆಯ ಉದ್ದೇಶ’ ಎಂದು ತಿಳಿಸಿದರು.
ಕೋಮು ಹಿಂಸೆ ನಿಗ್ರಹ ಕೋಶವನ್ನು ಈ ಹಿಂದೆ ರಚಿಸಿದ್ದೆವು. ಆದರೆ ಅದು ಪೊಲೀಸ್ ಬಲದ ಒಳಗೆ ಇತ್ತು. ಈಗ ಸ್ಥಾಪಿಸುವ ಕಾರ್ಯಪಡೆ ಪ್ರತ್ಯೇಕ ಘಟಕವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಎಂಟು ಆರೋಪಿಗಳ ಬಂಧನ
ಹಿಂದುತ್ವವಾದಿ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ‘ಎಲ್ಲ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ’ ಎಂದು ಗೃಹಸಚಿವ ಜಿ.ಪರಮೇಶ್ವರ ತಿಳಿಸಿದರು.
ಬಜಪೆ ಬಳಿಯ ಕಿನ್ನಿಪದವಿನಲ್ಲಿ ಮೇ 1ರಂದು ರಾತ್ರಿ ಸುಹಾಸ್ ಶೆಟ್ಟಿ ಕೊಲೆ ನಡೆದಿತ್ತು. ಕಿನ್ನಿಪದವಿನಲ್ಲಿ ವಾಸವಾಗಿರುವ ಪೇಜಾವರ ಗ್ರಾಮದ ಶಾಂತಿಗುಡ್ಡೆಯ ಅಬ್ದುಲ್ ಸಫ್ವಾನ್ ( 29), ಶಾಂತಿಗುಡ್ಡೆಯ ನಿಯಾಜ್ (28), ಕೆಂಜಾರು ಗ್ರಾಮದ ಮೊಹಮ್ಮದ್ ಮುಝಮಿಲ್ (32), ಕಳವಾರು ಕುರ್ಸುಗುಡ್ಡೆಯ ಕಲಂದರ್ ಶಾಫಿ (31), ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ರುದ್ರಪಾದೆಯ ರಂಜಿತ್ (19), ಕಳಸ ಕೋಟೆ ಹೊಳೆ ಮಾವಿನಕೆರೆ ಗ್ರಾಮದ ನಾಗರಾಜ್ (20), ಜೋಕಟ್ಟೆಯ ಮೊಹಮ್ಮದ್ ರಿಜ್ವಾನ್ (28) ಹಾಗೂ ಕಾಟಿಪಳ್ಳ ಮಂಗಳಪೇಟೆಯ ಆದಿಲ್ ಮೆಹರೂಫ್ ಬಂಧಿತ ಆರೋಪಿಗಳು ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದರು.
ಸಫ್ವಾನ್ ಮೇಲೆ 2023ರಲ್ಲಿ ಸುರತ್ಕಲ್‌ನಲ್ಲಿ ಸುಹಾಸ್ ಶೆಟ್ಟಿ ಸಹಚರ ಪ್ರಶಾಂತ್ ಹಾಗೂ ಧನರಾಜ್ ಮತ್ತಿತರರು ಹಲ್ಲೆ ನಡೆಸಿದ್ದರು. ಸುಹಾಸ್ ಶೆಟ್ಟಿ ತನ್ನನ್ನು ಕೊಲೆ ಮಾಡಬಹುದು ಎಂಬ ಭಯ ಸಫ್ವಾನ್‌ಗೆ ಇತ್ತು. 2022ರಲ್ಲಿ ಸುರತ್ಕಲ್‌ನಲ್ಲಿ ನಡೆದಿದ್ದ ಫಾಝಿಲ್ ಹತ್ಯೆಯಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಆ ಕಾರಣಕ್ಕೆ ಸುಹಾಸ್ ಶೆಟ್ಟಿ ಕೊಲೆ ಸಂಚು ರೂಪಿಸಿದ್ದ ಸಫ್ವಾನ್, ಫಾಜಿಲ್ ಸೋದರ ಆದಿಲ್ ಮೆಹರೂಫ್‌ನನ್ನು ಸಂಪರ್ಕಿಸಿದ್ದ. ಸುಹಾಸ್ ಶೆಟ್ಟಿ ಹತ್ಯೆಗೆ ಆದಿಲ್ ₹ 5 ಲಕ್ಷ ನೀಡಲು ಒಪ್ಪಿದ್ದ, ಆ ಪೈಕಿ ₹ 3 ಲಕ್ಷ ನೀಡಿದ್ದ ಎಂದರು.
‘ಕೊಲೆ ಆರೋಪಿ ನಿಯಾಜ್‌ಗೆ ನಾಗರಾಜ್ ಮತ್ತು ರಂಜಿತ್ ಸ್ನೇಹಿತರು. ಈ ಕೃತ್ಯಕ್ಕೆ ಅವರನ್ನೂ ಬಳಸಿಕೊಳ್ಳಲಾಗಿದೆ. ಅವರಿಬ್ಬರು ಕೊಲೆಗೆ ನೆರವಾಗಲು ಎರಡು ದಿನಗಳ ಮುಂಚಿತವಾಗಿಯೇ ಸಫ್ವಾನ್ ಮನೆಯಲ್ಲಿ ವಾಸ್ತವ್ಯವಿದ್ದರು. ಸುಹಾಸ್ ಶೆಟ್ಟಿಯ ಚಲನವಲನಗಳನ್ನು ಗಮನಿಸಿ, ಹೊಂಚುಹಾಕಿ
ಮೇ 1ರಂದು ರಾತ್ರಿ ಎಲ್ಲರೂ ಸೇರಿ ಕೊಲೆ ಮಾಡಿದ್ದಾರೆ’ ಎಂದು ಕಮಿಷನರ್ ತಿಳಿಸಿದರು.
ಇದು ಪ್ರತೀಕಾರದ ಹತ್ಯೆಯೇ ಎಂಬ ಪ್ರಶ್ನೆಗೆ, ‘ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಪೊಲೀಸ್ ಕಸ್ಟಡಿಗೆ ಪಡೆಯುತ್ತೇವೆ. ಅವರ ವಿಚಾರಣೆ ಬಳಿಕ ಹತ್ಯೆಯ ಸಮಗ್ರ ವಿವರ ಸಿಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.