ADVERTISEMENT

ಶಂಕರ-ಸಂಕರ ಪದ ಬಳಕೆ ಹಿಂದೆ ಆರೆಸ್ಸೆಸ್‌ 'ಮನು'ರೋಗ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 15:59 IST
Last Updated 9 ಜೂನ್ 2022, 15:59 IST
ಶಂಕರಾಚಾರ್ಯ
ಶಂಕರಾಚಾರ್ಯ   

ಬೆಂಗಳೂರು: ಶಂಕರಾಚಾರ್ಯರ ಪರಿಚಯ ಪಠ್ಯದಲ್ಲಿ ಸಂಕರ ಪದ ಬಳಕೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಈ ಪದ ಬಳಕೆ ಹಿಂದೆ ಅರೆಸ್ಸೆಸ್‌ 'ಮನು'ರೋಗದ ಮತಾಂಧತೆ ಇದೆ ಎಂದು ವಾಗ್ದಾಳಿ ನಡೆಸಿದೆ.

'ಶಂಕರ - ಸಂಕರ - ಕಲಬೆರೆಕೆ - ಒಪ್ಪತಕ್ಕದಲ್ಲದ ಮಿಶ್ರಣ. ಶಂಕರಾಚಾರ್ಯರ ಪರಿಚಯ ಪಠ್ಯದಲ್ಲಿ ಹೀಗೆ ಬರೆಯುವ ಹಿಂದಿನ ಉದ್ದೇಶವೇನು? ಅನಗತ್ಯವಾಗಿ ಈ ಅರ್ಥವನ್ನು ತೂರಿಸಿದ್ದೇಕೆ? ಮಾತೆತ್ತಿದರೆ 'ಹಿಂದೂ' ಜಪ ಮಾಡುವ ಬಿಜೆಪಿ ಹಿಂದೂ ಸಂತರಿಗೆ ಅಪಚಾರ ಮಾಡಿ ಮೌನ ವಹಿಸಿದೆ. ಇದರ ಹಿಂದೆ ಆರೆಸ್ಸೆಸ್‌ನ ಮನುರೋಗದ ಮತಾಂಧತೆ ಇರುವುದು ಸ್ಪಷ್ಟ' ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

'ಹಿಂದೂ ಧರ್ಮದ ಪೇಟೆಂಟ್ ಪಡೆದವರಂತೆ ಆಡುವ ಬಿಜೆಪಿಯ ನಕಲಿ ಹಿಂದೂಗಳು ಹಿಂದೂ ಧರ್ಮ ಪ್ರವರ್ತಕ ಶಂಕರಾಚಾರ್ಯರಿಗೆ ಅಗತ್ಯವಿಲ್ಲದ ಸಂಕರ ಎಂಬ ಪದವನ್ನು ಪಠ್ಯದಲ್ಲಿ ಸೇರಿಸಿ ಅದಕ್ಕೆ ಬೆರಕೆ ಎಂದು ಅರ್ಥೈಸಿ ಅವಮಾನಿಸಿದ್ದಾರೆ. ಇದು ಬಿಜೆಪಿಗರು ಹಿಂದೂ ಧರ್ಮಕ್ಕೆ ಎಸಗುತ್ತಿರುವ ದ್ರೋಹ. ಬಿಜೆಪಿಗರೇ, ಇದೇನಾ ನಿಮ್ಮ ಹಿಂದೂ ಪ್ರೀತಿ?' ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ADVERTISEMENT

'ಇಷ್ಟು ಸಾಲದೆಂಬಂತೆ ಹಿಂದೂಧರ್ಮದ ಭಕ್ತಿಪಂಥದ ಬೇರನ್ನು ಗಟ್ಟಿಗೊಳಿಸಿದ ಪುರಂದರದಾಸರ, ಕನಕದಾಸರ ಪಠ್ಯಗಳನ್ನು ಸಹ ಕಿತ್ತುಹಾಕುವುದರ ಮೂಲಕ ಹಿಂದೂಗಳ ಭಾವನೆಯೊಟ್ಟಿಗೆ ಚೆಲ್ಲಾಟವಾಡುತ್ತಿದ್ದಾರೆ. ಈ ಬಿಜೆಪಿಯ ನಕಲಿ ಹಿಂದೂಗಳಿಗೆ ನೈಜ ಹಿಂದೂ ಧರ್ಮದ ಪಾಠ ಮಾಡಬೇಕಾಗಿದೆ. ಬುದ್ಧ, ಬಸವ, ದಾಸಶ್ರೇಷ್ಠರು, ಶಂಕರರ ಮಹತ್ವ ತಿಳಿಸಿಕೊಡಬೇಕಾಗಿದೆ' ಎಂದು ಕಾಂಗ್ರೆಸ್‌ ಹೇಳಿದೆ.

9ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ, ಮತಾಚಾರ್ಯರಲ್ಲಿ ಮೊದಲನೆಯವರ ಹೆಸರು ಶಂಕರ. ಆದರೆ ಸಂಕರ ಎಂದರೆ ಬೆರಕೆ, ಕಲಬೆರಕೆ, ಒಪ್ಪತಕ್ಕದ್ದಲ್ಲದ ಮಿಶ್ರಣ ಎಂಬ ಅರ್ಥವು ಹೊಮ್ಮುತ್ತದೆ ಎಂಬ ಸಾಲುಗಳಿವೆ. ಮತಾಚಾರ್ಯರಲ್ಲಿ ಮೊದಲಿಗರಾದ, ಅದ್ವೈತ ಮತದ ಪ್ರತಿಪಾದಕರಾದ ಶಂಕರಾಚಾರ್ಯರ ಕುರಿತು ಹೇಳುವಾಗ ಸಂಕರ ಪದದ ಅಗತ್ಯತೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.