ADVERTISEMENT

ಕೋವಿಡ್‌ನಿಂದ ಮೃತಪಟ್ಟ ಗ್ರಾ.ಪಂ. ನೌಕರನ ಕುಟುಂಬಕ್ಕೆ ₹ 30 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 20:33 IST
Last Updated 31 ಆಗಸ್ಟ್ 2020, 20:33 IST
   

ಬೆಂಗಳೂರು: ಕೋವಿಡ್‌ 19 ಕರ್ತವ್ಯದಲ್ಲಿದ್ದಾಗ ಸೋಂಕು ತಗುಲಿ ಗ್ರಾಮ ಪಂಚಾಯಿತಿ ನೌಕರ ಮೃತಪಟ್ಟರೆ, ಅಂಥವರ ಕುಟುಂಬಕ್ಕೆ ₹ 30 ಲಕ್ಷ ವಿಮೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

ನೌಕರ ಕೋವಿಡ್‌ನಿಂದ ಮೃತಪಟ್ಟಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿ ಪ್ರಮಾಣಪತ್ರ ನೀಡಿದರೆ ಅಂಥವರ ಕುಟುಂಬಕ್ಕೆ ಜಿಲ್ಲಾ ಪಂಚಾಯಿತಿ ಅಥವಾ ತಾಲ್ಲೂಕು ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನದಿಂದ ಪರಿಹಾರ ಮೊತ್ತ ನೀಡಲು ಕ್ರಮಕೈಗೊಳ್ಳಿ ಎಂದು ಪಂಚಾಯತ್‌ ರಾಜ್ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಬಿಲ್‌ ಕಲೆಕ್ಟರ್‌, ಕ್ಲರ್ಕ್‌, ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌, ವಾಟರ್‌ಮೆನ್‌, ಜವಾನ ಸ್ವಚ್ಛತಾಗಾರರಿದ್ದಾರೆ. ಕೋವಿಡ್‌ ತಡೆಗಟ್ಟುವ ನಿಟ್ಟಿನಲ್ಲಿ ಈ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಪಂಚಾಯಿತಿಯಿಂದ ಈ ನೌಕರರಿಗೆ ಯಾವುದೇ ವಿಮೆ ಸೌಲಭ್ಯ ಇಲ್ಲ. ಅಲ್ಲದೆ, ಕನಿಷ್ಠ ವೇತನ ನೀಡಲಾಗುತ್ತಿದೆ. ಹೀಗಾಗಿ, ಕೋವಿಡ್‌ಗೆ ತುತ್ತಾಗಿ ಮೃತಪಟ್ಟರೆ, ₹ 30 ಲಕ್ಷ ಪರಿಹಾರ ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು.

ADVERTISEMENT

‘ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಮೋಸಗೊಳಿಸಿದ ಪರಿಣಾಮವಿದು!’

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌, ‘ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ಜನರನ್ನು ಭಾವನಾತ್ಮಕವಾಗಿ‌ ಮೋಸಗೊಳಿಸಿದ ಪರಿಣಾಮವಿದು..!’ ಎಂದಿದ್ದಾರೆ.

ಬೇರೆ ಬೇರೆ ದೇಶಗಳಲ್ಲಿನ ಕೋವಿಡ್‌ ಸೋಂಕಿತರ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿರುವ ಮಾಹಿತಿಯನ್ನೂ ಟ್ಯಾಗ್‌ ಮಾಡಿರುವ ಅವರು, ‘ಬಿಜೆಪಿ ಘೋಷಿತ ‘ವಿಶ್ವಗುರು’ಗಳ ಬತ್ತಳಿಕೆಯಲ್ಲಿ ಕೊರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿದ್ದಾವೋ..?’ ಎಂದೂ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.