ADVERTISEMENT

ಆಧಾರ್​ ಜೋಡಣೆ ಪೂರ್ಣಗೊಳಿಸಿ: ಎಸ್ಕಾಂಗಳಿಗೆ ಇಂಧನ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 16:19 IST
Last Updated 22 ಸೆಪ್ಟೆಂಬರ್ 2024, 16:19 IST
<div class="paragraphs"><p>ಆಧಾರ್​</p></div>

ಆಧಾರ್​

   

ಬೆಂಗಳೂರು: 10 ಎಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್​​ ಸ್ಥಾವರಗಳ ಆಧಾರ್​ ಜೋಡಣೆಯನ್ನು ಸೋಮವಾರದ (ಸೆ. 23) ಒಳಗೆ ಪೂರ್ಣಗೊಳಿಸುವಂತೆ ಎಲ್ಲ ಎಸ್ಕಾಂಗಳಿಗೆ (ವಿದ್ಯುತ್‌ ಸರಬರಾಜು ಕಂಪನಿಗಳು) ಇಂಧನ ಇಲಾಖೆ ಸೂಚನೆ ನೀಡಿದೆ.

ಈ ಬಗ್ಗೆ ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ‘10 ಎಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಅಕ್ಟೋಬರ್​ ತಿಂಗಳ ಸಹಾಯಧನ ಬಿಡುಗಡೆಯನ್ನು ವ್ಯವಸ್ಥಿತವಾಗಿ ಪಡೆಯಲು ಆಧಾರ್​ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಸೆ. 24ರ ಒಳಗೆ ವರದಿ ನೀಡಬೇಕು. ಆಧಾರ್ ಪ್ರಕ್ರಿಯೆ ಪೂರ್ಣಗೊಳ್ಳದೇ ಇದ್ದರೆ ಆಗುವ ಪರಿಣಾಮಗಳಿಗೆ ವಿದ್ಯುತ್​​ ಸರಬರಾಜು ಕಂಪನಿಗಳೇ ಹೊಣೆ ಆಗಲಿವೆ’ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ವಿದ್ಯುತ್​​ ಸರಬರಾಜು ಕಂಪನಿಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ಹೀಗಾಗಿ, ವಿದ್ಯುತ್ ಖರೀದಿ, ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲಗಳ ಮರುಪಾವತಿ ಮತ್ತು ಇತರೆ ವೆಚ್ಚಗಳನ್ನು ವ್ಯಯಿಸಲು ಸರ್ಕಾರದಿಂದ ಬಿಡುಗಡೆಯಾಗುವ ಸಹಾಯಧನವನ್ನು ಅವಲಂಬಿಸಿದೆ. ಸೆಪ್ಟೆಂಬರ್ ತಿಂಗಳ ಸಹಾಯಧನವನ್ನು ಬಿಡುಗಡೆ ಮಾಡುವಂತೆ ಮತ್ತೊಮ್ಮೆ ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದ್ದು, ಸಹಾಯಧನ ಬಿಡುಗಡೆ ಮಾಡಲು ಸಮ್ಮತಿಸಿದೆ. ಆದರೆ, ಅಕ್ಟೋಬರ್​ ತಿಂಗಳ ಸಹಾಯಧನ ಬೇಡಿಕೆಯನ್ನು ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಕೋರಿಕೆ ಸಲ್ಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆ ಸೆ. 23ರೊಳಗೆ ಕೃಷಿ ಪಂಪ್​ ಸೆಟ್​ಗಳ ಆಧಾರ್​ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಎಸ್ಕಾಂಗಳಿಗೆ ಸೂಚನೆ ನೀಡಲಾಗಿದೆ.

ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಟ್ಟು 33,83,064 ಸಕ್ರಿಯ ಕೃಷಿ ಪಂಪ್​ಸೆಟ್​ಗಳಿವೆ. ಸೆ. 17ರವರೆಗೆ 31,90,203 (ಶೇ 94.30) ಪಂಪ್​​ ಸೆಟ್​ಗಳಿಗೆ ಆಧಾರ್​ ಜೋಡಣೆಯಾಗಿದೆ. ಇನ್ನೂ 1,92,861 (ಶೇ 5.70) ಪಂಪ್ ಸೆಟ್​ಗಳಿಗೆ ಬಾಕಿ ಉಳಿಯಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.