ADVERTISEMENT

ರಾಜ್ಯದಾದ್ಯಂತ ಸಂಪೂರ್ಣ ಲಾಕ್‌ಡೌನ್‌: ಪ್ರಮುಖ ನಗರಗಳಲ್ಲಿ ಜನ ಸಂಚಾರ ವಿರಳ

​ಪ್ರಜಾವಾಣಿ ವಾರ್ತೆ
Published 24 ಮೇ 2020, 5:50 IST
Last Updated 24 ಮೇ 2020, 5:50 IST
ಬೆಂಗಳೂರು ವಿಮಾನ ನಿಲ್ದಾಣ ರಸ್ತೆ –ಪ್ರಜಾವಾಣಿ ಚಿತ್ರ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆ –ಪ್ರಜಾವಾಣಿ ಚಿತ್ರ   
""

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಭಾನುವಾರದ ಸಂಪೂರ್ಣ ಲಾಕ್‌ಡೌನ್‌ಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ರಾಜಧಾನಿ ಬೆಂಗಳೂರು ನಗರವೂ ಸೇರಿದಂತೆ ವಿವಿಧ ಕಡೆಗಳಲ್ಲಿ ಜನ ಸಂಚಾರ ವಿರಳಾತಿ ವಿರಳವಾಗಿದೆ. ಬೀದರ್, ಬಳ್ಳಾರಿ, ರಾಮನಗರ ಬಹುತೇಕ ಸ್ತಬ್ಧವಾಗಿದೆ. ಬೀದರ್‌ನಲ್ಲಿ ಬಸ್ ನಿಲ್ದಾಣಗಳು ಹಾಗೂ ರಸ್ತೆಗಳು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ.

ರಾಮನಗರ ಜಿಲ್ಲೆ ಸ್ತಬ್ಧ: ಮುಂಜಾನೆಯಿಂದಲೇ ರಾಮನಗರ ಜಿಲ್ಲೆ ಸಂಪೂರ್ಣ ಸ್ತಬ್ಧ ಆಗಿದೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಅಂಗಡಿ ಮುಂಗಟ್ಟು ಮುಚ್ಚಿವೆ. ಹೋಟೆಲ್‌ಗಳೂ ಬಂದ್ ಆಗಿವೆ. ರೇಷ್ಮೆ ಮಾರುಕಟ್ಟೆ ಸಹ ಬಂದ್ ಆಗಿದೆ.‌ ಹಾಲು, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೆಲವೆಡೆ ಮಾಂಸ ಮಾರಾಟ ನಡೆದಿದೆ.

ADVERTISEMENT

ಪೊಲೀಸರು ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿದ್ದು, ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವವರನ್ನು ಎಚ್ಚರಿಸುತ್ತಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಓಡಾಟ ಕಡಿಮೆ ಇದೆ.

ಬಳ್ಳಾರಿಯಲ್ಲಿಯೂ ಸಂಪೂರ್ಣ ಲಾಕ್‌ಡೌನ್ ಆಗಿದೆ. ತಾತ್ಕಾಲಿಕ ಮಾರುಕಟ್ಟೆಗಳಲ್ಲೂ ಜನ ವಿರಳವಾಗಿದ್ದಾರೆ.

ಬಾಗಲಕೋಟೆಯಲ್ಲಿಯೂ ಬಂದ್ ವಾತಾವರಣ

ಬಾಗಲಕೋಟೆ ಬಸ್ ನಿಲ್ದಾಣದ ಪ್ರವೇಶ ದ್ವಾರ ಬಂದ್ ಮಾಡಲಾಗಿದೆ

ಲಾಕ್‌ಡೌನ್‌ಗೆ ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಲು, ಮೆಡಿಕಲ್, ಆಸ್ಪತ್ರೆ ಹಾಗೂ ಮಾಂಸದಂಗಡಿ ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ. ಮದ್ಯ ಮಾರಾಟ ಬಂದ್ ಆಗಿದೆ. ಸಮೂಹ ಸಾರಿಗೆ ಮಾತ್ರವಲ್ಲ ಖಾಸಗಿ ವಾಹನಗಳು ರಸ್ತೆಗೆ ಇಳಿಯಲು ಅವಕಾಶ ನೀಡಿಲ್ಲ. ಹೀಗಾಗಿ ಬಾಗಲಕೋಟೆಯ ಪ್ರಮುಖ ರಸ್ತೆಗಳು ನಿರ್ಜನಗೊಂಡಿವೆ. ಇಡೀ ನಗರ ಬಿಕೊ ಎನ್ನುತ್ತಿದೆ.

ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಘೋಷಿಸಿದಂತೆ, ರಾಜ್ಯದಾದ್ಯಂತ ಇಂದು ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದೆ.

ಕಲಬುರ್ಗಿಯಲ್ಲಿ ಪೂರ್ಣ ಲಾಕ್‌ಡೌನ್:ಭಾನುವಾರದ ಲಾಕ್ ಡೌನ್ ಅಂಗವಾಗಿ ನಗರದಲ್ಲಿ ಬಸ್ ಹಾಗೂ ಇತರ ವಾಹನಗಳ ಸಂಚಾರ ಸ್ತಬ್ದಗೊಂಡಿದೆ. ಲಾಕ್ ಡೌನ್ ಜೊತೆಗೆ ಬಿಸಿಲಿನ ತಾಪ ಹೆಚ್ಚಿದ್ದರಿಂದ ಜನಸಂಚಾರವೂ ವಿರಳಗೊಂಡಿದೆ‌. ನಗರದಲ್ಲಿ ಆಟೊ ಸಂಚಾರ ಹಾಗೂ ಕಿರಾಣಿ ಅಂಗಡಿ ಹೊರತುಪಡಿಸಿ ಉಳಿದ ವಾಣಿಜ್ಯ ಚಟುವಟಿಕೆಗಳಿಗೆ ಮೊದಲಿನಿಂದಲೂ ನಿರ್ಬಂಧ ಮುಂದುವರಿದೇ ಇದೆ.ಇದಕ್ಕೆ ಪೂರಕವಾಗಿ ಬಸ್, ಖಾಸಗಿ ವಾಹನ ಸಂಚಾರ ಸ್ತಗಿತಗೊಂಡಿದ್ದರಿಂದ ನಗರದ‌ ರಸ್ತೆಗಳು ಖಾಲಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.