ADVERTISEMENT

ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ: ಅಕ್ರಮ ತಡೆಗೆ ‘ಸಿಬಿಟಿ’ ಮೊರೆ

ಒಎಂಆರ್‌ ಶೀಟ್‌ ತಿದ್ದುವಿಕೆಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 0:30 IST
Last Updated 14 ಜನವರಿ 2025, 0:30 IST
   
ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲು ಸೂಚನೆ | ಕಾರ್ಯಸಾಧ್ಯತಾ ವರದಿ 15 ದಿನಗಳ ಒಳಗೆ ಸಲ್ಲಿಕೆ | ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಲಭ್ಯ ಮಾಹಿತಿ ಸಂಗ್ರಹ 

ಬೆಂಗಳೂರು: ವಿವಿಧ ವೃಂದಗಳ ಹುದ್ದೆಗಳಿಗೆ ನೇಮಕಾತಿ ಮತ್ತು ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ (ಆಪ್ಟಿಕಲ್ ಮಾರ್ಕ್ಸ್ ರೆಕಗ್ನಿಷನ್) ಶೀಟ್‌  ತಿದ್ದುವುದು ಸೇರಿದಂತೆ ನಡೆಯುವ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ‘ಕಂಪ್ಯೂಟರ್ ಆಧಾರಿತ ಪರೀಕ್ಷೆ’ (ಸಿಬಿಟಿ) ಪದ್ಧತಿಯನ್ನು ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯದರ್ಶಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ, ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸುವ ಪರೀಕ್ಷಾ ಮೌಲ್ಯಮಾಪನ ಮಂಡಳಿಯ ಮುಖ್ಯಸ್ಥರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿಯನ್ನು ಒಳಗೊಂಡ ಸಮಿತಿಯು 15 ದಿನಗಳ ಒಳಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಾರ್ಯಸಾಧ್ಯತಾ ವರದಿ ಸಲ್ಲಿಸಲಿದೆ.

ನೇಮಕಾತಿ ಪ್ರಾಧಿಕಾರಗಳು ಇತ್ತೀಚಿನ ದಿನಗಳಲ್ಲಿ ನಡೆಸುತ್ತಿರುವ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಕೆಪಿಎಸ್‌ಸಿ ಕಾರ್ಯದರ್ಶಿ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರೂ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಪರೀಕ್ಷೆಗಳನ್ನು ಪಾರದರ್ಶಕ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಆಯೋಜಿಸಲು ಕ್ರಮ ಕೈಗೊಳ್ಳುವ ಅಗತ್ಯ ಮತ್ತು ಹೊಸ ಪದ್ಧತಿಯನ್ನು ಜಾರಿಗೊಳಿಸುವ ಕುರಿತು ಸಮಾಲೋಚನೆ ನಡೆಸಿದ್ದಾರೆ.

ADVERTISEMENT

ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ‘ನೀಟ್‌–ಯುಜಿ’ ಪರೀಕ್ಷೆಯ ಅಕ್ರಮಗಳ ಕುರಿತು ತನಿಖೆ ನಡೆಸಿದ್ದ ಸಮಿತಿ ಕೂಡಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಂಪ್ಯೂಟರ್ ಆಧಾರಿತವಾಗಿ ನಡೆಸುವಂತೆ ಸಲಹೆ ನೀಡಿದೆ. ಹೀಗಾಗಿ, ವಿವಿಧ ವೃಂದಗಳ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಾಧಿಕಾರಗಳು ಏಕೀಕೃತ ಕಂಪ್ಯೂಟರ್‌ ಆಧಾರಿತ ಆನ್‌ಲೈನ್‌ ಪರೀಕ್ಷೆ ನಡೆಸಲು, ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಮತ್ತು ಇಲಾಖಾ ಪರೀಕ್ಷೆಗಳಿಗೂ ಇದೇ ಮಾದರಿಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಪದ್ಧತಿ ಅನುಷ್ಠಾನಗೊಳಿಸಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕಿದೆ. ಜೊತೆಗೆ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಮೂಲಸೌಲಭ್ಯವನ್ನು ಒದಗಿಸಬೇಕಿದೆ.

ಹಲವು ಖಾಸಗಿ ಏಜೆನ್ಸಿಗಳು ಕಂಪ್ಯೂಟರ್‌ ಆಧಾರಿತ ಪರೀಕ್ಷೆಗಳನ್ನು ನಡೆಸುತ್ತಿವೆ. ಈ ಏಜೆನ್ಸಿಗಳ ಬಳಿ ಅಂತಹ ತಂತ್ರಾಂಶವಿದೆ. ಅದೇ ಮಾದರಿಯಲ್ಲಿ ಇ– ಆಡಳಿತ ಮತ್ತು ರಾಷ್ಟ್ರೀಯ ದತ್ತಾಂಶ ನಿರ್ವಹಣಾ ಕೇಂದ್ರದ (ಎನ್‌ಐಸಿ) ಸಹಭಾಗಿತ್ವದಲ್ಲಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಜೊತೆಗೆ, ಎಂಜಿನಿಯರಿಂಗ್, ಬಿಸಿಎ, ಎಂಸಿಎ ಕೋರ್ಸ್‌ ಇರುವ ಶಿಕ್ಷಣ ಸಂಸ್ಥೆಗಳಲ್ಲಿರುವ ಮೂಲಸೌಲಭ್ಯ ವ್ಯವಸ್ಥೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ಸಿಬಿಟಿ ಪದ್ಧತಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. 

ರಾಜ್ಯದಲ್ಲಿ ಖಾಸಗಿ, ಸರ್ಕಾರಿ, ಅನುದಾನಿತ ಎಂಜಿನಿಯರಿಂಗ್‌ ಕಾಲೇಜುಗಳು, ‌ಪಾಲಿಟೆಕ್ನಿಕ್‌ಗಳ ಪೈಕಿ ಶೇ 80ರಲ್ಲಿ ಕಂಪ್ಯೂಟರ್‌ ವಿಭಾಗಗಳಿವೆ. ವಿದ್ಯಾರ್ಥಿಗಳ ಅನುಪಾತಕ್ಕೆ ಅನುಗುಣವಾಗಿ ಕಂಪ್ಯೂಟರ್ ಇರಬೇಕು ಎಂಬ ನಿಯಮವನ್ನು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ರೂಪಿಸಿದೆ. ಹೀಗಾಗಿ, ರಾಜ್ಯದಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಪರೀಕ್ಷಾ ಕೇಂದ್ರಗಳಾಗಿ ಬಳಸಿಕೊಂಡು ಸಿಬಿಟಿ ಮಾದರಿ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

‘ಕೆಇಎ ಇತ್ತೀಚೆಗೆ ನಡೆಸಿರುವ 15 ಪರೀಕ್ಷೆಗಳಲ್ಲಿ ಎಂಟು ಪರೀಕ್ಷೆಗಳಲ್ಲಿ 25 ಸಾವಿರಕ್ಕೂ ಕಡಿಮೆ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆ ಆಗದ ಹುದ್ದೆಗಳಿಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆಗಳನ್ನು ನಡೆಸಿ, ಮುಂದಿನ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗುವ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗಳಿಗೆ ಸಿಬಿಟಿ ಪದ್ಧತಿ ಅಳವಡಿಸುವ ಕುರಿತು ಚರ್ಚೆ ನಡೆದಿದೆ. ಈ ವ್ಯವಸ್ಥೆಯಿಂದ ಪರೀಕ್ಷೆಗಳನ್ನು ನಡೆಸಲು ತಗಲುವ ವೆಚ್ಚವೂ ಕಡಿಮೆ ಆಗಲಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ತಿಳಿಸಿದರು.

ನೇಮಕಾತಿ ಕೋರ್ಸ್‌ಗಳಿಗೆ ನಡೆಸುವ ಪರೀಕ್ಷೆಗಳಲ್ಲಿ ಹಂತ ಹಂತವಾಗಿ ಸಿಬಿಟಿ ವ್ಯವಸ್ಥೆ ಅಳವಡಿಸಲು ಚರ್ಚೆ ನಡೆದಿದ್ದು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿರುವ ಮೂಲಸೌಲಭ್ಯಗಳ ಕುರಿತು ವರದಿ ನೀಡಲಾಗುವುದು
ಎಚ್‌. ಪ್ರಸನ್ನ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.