ADVERTISEMENT

ಕೊರಗ ಸಮುದಾಯದವರ ಮೇಲೆ ಸುಳ್ಳು ಪ್ರಕರಣ: ಎಚ್‌.ಸಿ ಮಹದೇವಪ್ಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2021, 9:05 IST
Last Updated 31 ಡಿಸೆಂಬರ್ 2021, 9:05 IST
ಎಚ್‌.ಸಿ ಮಹದೇವಪ್ಪ
ಎಚ್‌.ಸಿ ಮಹದೇವಪ್ಪ   

ಬೆಂಗಳೂರು:ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ಕೊರಗ ಸಮುದಾಯದವರ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಎಚ್‌.ಸಿ ಮಹದೇವಪ್ಪ, ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, 'ಕೊರಗರ ಮೇಲೆ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದರು.ಆದರೆ ಅಚ್ಚರಿ ಎಂಬಂತೆ ಯಾವ ಕೊರಗರ ಮೇಲೆ ಹಲ್ಲೆ ನಡೆಸಲಾಗಿತ್ತೋ ಇದೀಗ ಅವರ ಮೇಲೆಯೇ ಪೊಲೀಸರು ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿದ್ದು, ಇದು ಮೇಲ್ನೋಟಕ್ಕೆ ಅತ್ಯಂತ ಸುಳ್ಳು ಪ್ರಕರಣವೇ ಆಗಿದೆ' ಎಂದು ಆರೋಪಿಸಿದ್ದಾರೆ.

'ಕಾರಣ, ಪೊಲೀಸರು ಹಲ್ಲೆ ನಡೆದ ದಿನವೇ ತಮ್ಮ ಮೇಲಾದ ದಾಳಿಯ ಸುದ್ದಿಯ ಬಗ್ಗೆ ತಿಳಿಸದೆ,ವಿಷಯವು ಸ್ವಲ್ಪ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮೂಲ ವಿಷಯವನ್ನು ತಿರುಚುವಂತೆ ಬಹು ತಡವಾಗಿ ಪ್ರತಿಕ್ರಿಯೆ ನೀಡಿ ಕೇಸು ದಾಖಲಿಸಿರುವುದು ಕೊರಗರ ಮೇಲಿನ ಸರ್ಕಾರಿ ಪ್ರಾಯೋಜಿತ ದಾಳಿಯಾಗಿದೆ ಎಂಬುದು ಅತ್ಯಂತ ಸ್ಪಷ್ಟವಾಗಿದೆ' ಎಂದು ಹೇಳಿದ್ದಾರೆ.

ADVERTISEMENT

ಮುಂದುವರಿದು, 'ಒಂದು ವೇಳೆ ಪೊಲೀಸರ ಮೇಲೆ ಕೊರಗರು ಹಲ್ಲೆ ನಡೆಸಿದ್ದೇ ನಿಜವಾದರೆ, ಈ ಸಂಗತಿಯನ್ನು ಪೊಲೀಸರು ಅಂದೇ ಏಕೆ ತಿಳಿಸಲಿಲ್ಲ? ಮತ್ತು ಯಾವ ಕಾರಣಕ್ಕೆ ಸಚಿವರ ಹೇಳಿಕೆಗಳು ಪ್ರಕಟಗೊಂಡ ಮೇಲೆ ಈ ರೀತಿ ಹೇಳಿಕೆ ನೀಡಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ? ಎಂದು ಪ್ರಶ್ನಿಸಿರುವ ಅವರು, ಈ ಕುರಿತು ಸ್ಪಷ್ಟತೆ ಇಲ್ಲದೇ ಇರುವುದು ಅನುಮಾನಗಳಿಗೆ ಕಾರಣ ಎಂದು ದೂರಿದ್ದಾರೆ.

'ಈ ವಿಚಾರದಲ್ಲಿ ಎಲ್ಲರೂ ಕೊರಗರ ಪರವಾಗಿ ನಿಲ್ಲಲು ಕೋರುತ್ತೇನೆ.ಇನ್ನು ಹಲ್ಲೆ ಯಾರ ಮೇಲೆ ನಡೆದಿದ್ದರೂ ಅದು ತಪ್ಪೇ. ಆದರೆ ಇದನ್ನೇ ಸುಳ್ಳು ಬಂಡವಾಳವಾಗಿಸಿ ಪ್ರಕರಣ ದಾಖಲಿಸುವ, ಅದರಲ್ಲೂ ಜಾಮೀನು ರಹಿತ ಪ್ರಕರಣ ದಾಖಲಿಸುವ ಗೃಹ ಸಚಿವರ ಕ್ರಮವು ದಲಿತರ ಮೇಲಿನ ದೌರ್ಜನ್ಯವೇ ಆಗಿದೆ!' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.