ADVERTISEMENT

ಲಾಕ್‌ಡೌನ್: ಮದುವೆ ಮಾಡುವುದಿದ್ದರೆ ಈ ನಿಬಂಧನೆಗಳನ್ನು ಪಾಲಿಸಿ

ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 16 ಮೇ 2020, 6:44 IST
Last Updated 16 ಮೇ 2020, 6:44 IST
ಲಾಕ್‌ಡೌನ್‌ನ ಸಡಿಲಿಕೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಾಸನ ನಗರದಲ್ಲಿ ಮದುವೆ ಸಮಾರಂಭಕ್ಕೆ ಅಲಂಕಾರ ಮಾಡುತ್ತಿದ ದೃಶ್ಯ
ಲಾಕ್‌ಡೌನ್‌ನ ಸಡಿಲಿಕೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಾಸನ ನಗರದಲ್ಲಿ ಮದುವೆ ಸಮಾರಂಭಕ್ಕೆ ಅಲಂಕಾರ ಮಾಡುತ್ತಿದ ದೃಶ್ಯ    

ಬೆಂಗಳೂರು: ಮದುವೆ ಹಾಗೂ ಕೆಲವು ವಿಶೇಷ ಕಾರ್ಯಕ್ರಮಗಳಿಗೆ ಕೆಲವೊಂದು ನಿಬಂಧನೆಗಳೊಂದಿಗೆ ಅವಕಾಶ ನೀಡಿರುವ ಆರೋಗ್ಯ ಇಲಾಖೆ, ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಂಡು ಮದುವೆ ಹಾಗೂ ಕಾರ್ಯಕ್ರಮಗಳನ್ನು ನಡೆಸಬಹುದು. ಆದರೆ, ವಿಶೇಷ ಕಾರ್ಯಕ್ರಮಗಳು ಯಾವುವು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಿಲ್ಲ.

ಗರಿಷ್ಠ 50 ಮಂದಿ ಸೇರಲು ಮಾತ್ರ ಅವಕಾಶ ಇರಲಿದೆ. ಸಹಜ ಗಾಳಿ ಹಾಗೂ ಬೆಳಕು ಇರುವ ಕಡೆ ಕಾರ್ಯಕ್ರಮಗಳನ್ನು ನಡೆಸಬೇಕು. ಹವಾನಿಯಂತ್ರಣ ಯಂತ್ರಗಳನ್ನು (ಎ.ಸಿ) ಬಳಕೆ ಮಾಡಕೂಡದು. ಕಂಟೈನ್‌ಮೆಂಟ್ ವಲಯದಿಂದ ಬರುವ ಅತಿಥಿಗಳಿಗೆ ಭಾಗವಹಿಸಲು ಅವಕಾಶವಿಲ್ಲ. ಗರ್ಭಿಣಿ, 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಕೂಡ ಭಾಗವಹಿಸಬಾರದು ಎಂದು ಇಲಾಖೆ ತಿಳಿಸಿದೆ.

ADVERTISEMENT

ಭಾಗವಹಿಸಿದವರಲ್ಲಿ ಶೀತ, ಜ್ವರ, ಕೆಮ್ಮು ಸೇರಿದಂತೆ ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳು ಇದ್ದಲ್ಲಿ ಅಂಥವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮುಖಗವಸನ್ನು ಧರಿಸಿರಬೇಕು. ಕೈಗಳನ್ನು ಸ್ವಚ್ಛಪಡಿಸಿಕೊಳ್ಳಲು ಸ್ಯಾನಿಟೈಸರ್ ಹಾಗೂ ಸೋಪುಗಳನ್ನು ಎಲ್ಲೆಡೆ ಇಡಬೇಕು. ತಂಬಾಕು ಉತ್ಪನ್ನವನ್ನು ಬಳಸುವ ಹಾಗಿಲ್ಲ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಸೂಚಿಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ವಿವಾಹ ಅಥವಾ ಕಾರ್ಯಕ್ರಮಕ್ಕೆ ನೋಡಲ್ ವ್ಯಕ್ತಿಯನ್ನು ನೇಮಿಸಿರಬೇಕು. ಅವರಿಗೆ ಭಾಗವಹಿಸುವವರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯ ಮಾಹಿತಿಯನ್ನು ಒದಗಿಸಿರಬೇಕು. ಪಾಲ್ಗೊಳ್ಳುವ ಪ್ರತಿಯೊಬ್ಬರೂ ‘ಆರೋಗ್ಯ ಸೇತು’ ಮೊಬೈಲ್‌ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಳ್ಳಬೇಕು ಎಂದು ಮಾರ್ಗ
ಸೂಚಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.