ಬೆಂಗಳೂರು: ರಾಜ್ಯದ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿರುವ 400ಕ್ಕೂ ಅಧಿಕ ಔಷಧಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ರಾಜ್ಯ ಔಷಧ ನಿಯಂತ್ರಣ ಇಲಾಖೆ ನಡೆಸಿದ ಪ್ರಯೋಗಾಲಯ ಪರೀಕ್ಷೆಗಳಿಂದ ದೃಢಪಟ್ಟಿದೆ.
ಬಳ್ಳಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ‘ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್’ ಕಂಪನಿ ಪೂರೈಸಿದ್ದ ‘ರಿಂಗರ್ ಲ್ಯಾಕ್ಟೇಟ್’ ಐವಿ ದ್ರಾವಣವನ್ನು ರಾಜ್ಯದಲ್ಲಿ ನಿಷೇಧ ಮಾಡಲಾಗಿದೆ. ರಾಜ್ಯದ ಔಷಧ ನಿಯಂತ್ರಕರು ನಡೆಸಿದ ಪರೀಕ್ಷೆಯಲ್ಲಿ ಈ ದ್ರಾವಣದ 22 ಬ್ಯಾಚ್‌ಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂಬ ವರದಿ ಬಂದಿತ್ತು. ಇದರಿಂದಾಗಿ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯದ ಒಂಬತ್ತು ಜಿಲ್ಲಾ ವೃತ್ತಗಳಲ್ಲಿ ಹೆಚ್ಚುವರಿ ಔಷಧ ನಿಯಂತ್ರಕರು ದೂರು ದಾಖಲಿಸಿಕೊಂಡಿದ್ದಾರೆ.
ಇದೇ ರೀತಿ, ರಾಜ್ಯ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ವಿವಿಧ ಔಷಧಗಳ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಗಳಲ್ಲಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸಿದ್ದರು. ಹಲವು ಔಷಧಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ಪರೀಕ್ಷಾ ವರದಿಗಳಿಂದ ಖಚಿತಪಟ್ಟಿದೆ.
ರಾಜ್ಯದ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಹಾಗೂ ಕ್ಲಿನಿಕ್‌ಗಳಲ್ಲಿ ಬಳಸಲಾಗುತ್ತಿರುವ ಔಷಧಗಳಿಗೆ ಸಂಬಂಧಿಸಿದಂತೆ 2023–24ನೇ ಸಾಲಿನಲ್ಲಿ ಇಲಾಖೆ ಅಧಿಕಾರಿಗಳು 7,420 ಔಷಧಗಳ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದ್ದರು. ಈ ಮಾದರಿಗಳಲ್ಲಿ 285 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲವೆಂಬ ವರದಿ ಬಂದಿದೆ. 2024–25ನೇ ಸಾಲಿನಲ್ಲಿ (ಅಕ್ಟೋಬರ್‌ವರೆಗೆ) 3,636 ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 177 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ದೃಢಪಟ್ಟಿದೆ.
ಪರಿಶೀಲನೆಯಿಂದ ದೃಢ: ಔಷಧ ತಯಾರಿಕಾ ಕಂಪನಿಗಳು ಔಷಧಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡುವ ಮುನ್ನ ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳನ್ನು ನಡೆಸಿ, ವಿವಿಧ ಮಾನದಂಡಗಳ ಆಧಾರದಲ್ಲಿ ಪ್ರಮಾಣಿತ ಗುಣಮಟ್ಟ ಹೊಂದಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕಾಗುತ್ತದೆ. ಇಷ್ಟಾಗಿಯೂ ಕೆಲವು ಕಂಪನಿಗಳ ಔಷಧಗಳ ವಿವಿಧ ಬ್ಯಾಚ್‌ಗಳು ಪ್ರಮಾಣಿತ ಗುಣಮಟ್ಟ ಹೊಂದಿರದಿರುವುದು ರಾಜ್ಯ ಔಷಧ ನಿಯಂತ್ರಕರು ನಡೆಸುವ ಪ್ರಯೋಗಾಲಯ ಪರೀಕ್ಷೆಯಿಂದ ದೃಢಪಡುತ್ತಿದೆ.
‘ರಿಂಗರ್ ಲ್ಯಾಕ್ಟೇಟ್’ ಐವಿ ದ್ರಾವಣಕ್ಕೆ ಸಂಬಂಧಿಸಿದಂತೆ ರಾಜ್ಯದ ಔಷಧ ನಿಯಂತ್ರಕರು ನಡೆಸಿದ ಪರೀಕ್ಷೆಯಲ್ಲಿ 22 ಬ್ಯಾಚ್‌ಗಳು ಪ್ರಮಾಣಿತ ಗುಣಮಟ್ಟ ಹೊಂದಿರಲಿಲ್ಲ ಎಂಬ ವರದಿಗಳು ಬಂದಿದ್ದವು. ಕೇಂದ್ರೀಯ ಔಷಧ ಪ್ರಯೋಗಾಲಯ ನಡೆಸಿದ ಪರೀಕ್ಷೆಗಳಲ್ಲಿ ಇದೇ ದ್ರಾವಣದ 13 ಬ್ಯಾಚ್‌ಗಳಲ್ಲಿ ನಾಲ್ಕು ಬ್ಯಾಚ್‌ಗಳು ಗುಣಮಟ್ಟ ಹೊಂದಿವೆ ಎಂಬ ವರದಿ ಬಂದಿತ್ತು. ಇದು ಗೊಂದಲಕ್ಕೆ ಕಾರಣವಾಗಿದೆ.
‘ಔಷಧಗಳ ಗುಣಮಟ್ಟ ಪರಿಶೀಲನೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ ಇರುವ ಇಲಾಖೆಯ ಪ್ರಯೋಗಾಲಯಗಳಿಗೆ ಔಷಧಗಳ ಮಾದರಿಗಳನ್ನು ನಿಯಮಿತವಾಗಿ ಕಳುಹಿಸಲಾಗುತ್ತಿದೆ. ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳ ಕಂಪನಿಗಳ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪರವಾನಗಿ ಇಲ್ಲದೆ ಕಾರ್ಯನಿರ್ವಹಣೆ
ರಾಜ್ಯದಲ್ಲಿ 37 ಸಾವಿರಕ್ಕೂ ಅಧಿಕ ಖಾಸಗಿ ಔಷಧ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಖಾಸಗಿ ಔಷಧ ಮಳಿಗೆಗಳನ್ನು ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ಮಾಡುತ್ತಿದ್ದಾರೆ. 24 ಔಷಧ ಮಳಿಗೆಗಳು ಪರವಾನಗಿ ಇಲ್ಲದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಎರಡು ವರ್ಷಗಳಲ್ಲಿ ಪತ್ತೆಮಾಡಲಾಗಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಗಳ ಗುಣಮಟ್ಟದ ಬಗ್ಗೆ ನಿಗಾ ವಹಿಸಲಾಗಿದೆ. ಆಸ್ಪತ್ರೆಗಳಲ್ಲಿ ಬಳಸುವ ಔಷಧಗಳ ಮಾದರಿಗಳನ್ನೂ ಪರೀಕ್ಷಿಸಿ ಗುಣಮಟ್ಟ ಖಚಿತಪಡಿಸಿಕೊಳ್ಳಲಾಗುತ್ತಿದೆ.-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.