ADVERTISEMENT

ಸಂಪುಟ ವಿಸ್ತರಿಸಿದರೆ ‘ಕೈ’ ಸುಡುವ ಭೀತಿ

ಸಚಿವಸ್ಥಾನ ಆಕಾಂಕ್ಷಿಗಳಿಂದ ಹೆಚ್ಚಿದ ಒತ್ತಡ; ರಾಜ್ಯ ನಾಯಕರ ಚರ್ಚೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:18 IST
Last Updated 7 ನವೆಂಬರ್ 2018, 20:18 IST
   

ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರ, ಜಮಖಂಡಿ ವಿದಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದ ಸಂಭ್ರಮದ ಮಧ್ಯೆಯೇ, ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಪಕ್ಷದೊಳಗೆ ಒತ್ತಡ ಹೆಚ್ಚಿದೆ.

ಈ ಕಸರತ್ತಿಗೆ ‘ಕೈ’ಹಾಕಿದರೆ ಭಿನ್ನಮತ ಭುಗಿಲೆದ್ದು, ಕೈಸುಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಳ್ಳಬಹುದೇ ಎಂಬ ಆತಂಕ ಪಕ್ಷದ ನಾಯಕರನ್ನು ಕಾಡತೊಡಗಿದೆ.

ಕೇಂದ್ರ ಸರ್ಕಾರ ನೋಟು ರದ್ದುಪಡಿಸಿ ಇದೇ 8ಕ್ಕೆ ಎರಡು ವರ್ಷ ತುಂಬಲಿದ್ದು, 9ರಂದು ಕಾಂಗ್ರೆಸ್‌ ದೇಶದಾದ್ಯಂತ ಕಪ್ಪು ದಿನ ಆಚರಿಸಲಿದೆ. ನಗರದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಬರಲಿದ್ದು, ಸಂಪುಟ ವಿಸ್ತರಣೆ ಕುರಿತು ರಾಜ್ಯ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ADVERTISEMENT

ದೀಪಾವಳಿ ಶುಭಾಶಯ ಕೋರುವ ನೆಪದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿ
ಸಿದ್ದಾರೆ. ಈ ವೇಳೆ ಕೆಲವು ಮಹತ್ವದ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಸಂಪುಟದಲ್ಲಿ ಖಾಲಿ ಉಳಿದಿರುವ ಕಾಂಗ್ರೆಸ್‌ ಪಾಲಿನ ಆರು ಸ್ಥಾನಗಳಿಗೆ ದುಪ್ಪಟ್ಟು ಆಕಾಂಕ್ಷಿಗಳಿದ್ದಾರೆ. ಸಚಿವ ಸ್ಥಾನ ಅಲಂಕರಿಸಿರುವವರ ಪೈಕಿ ಕೆಲವರನ್ನು ಬದಲಿಸುವ ಚಿಂತನೆಯೂ ಪಕ್ಷದಲ್ಲಿದೆ. ಸಂಪುಟದಲ್ಲಿ ಅವಕಾಶ ಸಿಗದ ಶಾಸಕರನ್ನು ನಿಗಮ ಮಂಡಳಿಗೆ ನೇಮಿಸಲು ಚರ್ಚೆ ನಡೆದಿದೆ.

ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗೆ ನೇಮಕ ಸಂಬಂಧಿಸಿದಂತೆ ಸಿದ್ದರಾಮಯ್ಯ, ಪರಮೇಶ್ವರ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದ್ದು, ಇದೇ 15ರ ಬಳಿಕ ಈ ನಾಯಕರು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜಮಖಂಡಿ, ಬಳ್ಳಾರಿ ಕ್ಷೇತ್ರಗಳ ಗೆಲುವಿಗೆ ಕಾರಣರಾದವರನ್ನು ಸಂ‍ಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕ ಸಂದರ್ಭದಲ್ಲಿ ಪರಿಗಣಸಬೇಕಾದ ಅನಿವಾರ್ಯತೆ ಪಕ್ಷಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.