ADVERTISEMENT

ಫೈಟರ್ ರವಿಗೆ ಕೈಮುಗಿದು ನಿಂತ ಮೋದಿ: ಪ್ರಧಾನಿ ಹುದ್ದೆಗೆ ಕಳಂಕ ಎಂದ ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮಾರ್ಚ್ 2023, 16:00 IST
Last Updated 12 ಮಾರ್ಚ್ 2023, 16:00 IST
ರಾಜ್ಯಕ್ಕೆ ಆಗಮಿಸಿದ ಪ್ರಧಾನಿಯವರನ್ನು ಆಹ್ವಾನಿಸುತ್ತಿರುವ ಫೈಟರ್‌ ರವಿ
ರಾಜ್ಯಕ್ಕೆ ಆಗಮಿಸಿದ ಪ್ರಧಾನಿಯವರನ್ನು ಆಹ್ವಾನಿಸುತ್ತಿರುವ ಫೈಟರ್‌ ರವಿ    

ಬೆಂಗಳೂರು: ಮಲ್ಲಿಕಾರ್ಜುನ್‌ (ಫೈಟರ್‌ ರವಿ) ಎಂಬುವವರ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಫೈಟರ್‌ ರವಿ ಅವರನ್ನು ರೌಡಿ ಶೀಟರ್‌ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕಾಂಗ್ರೆಸ್‌ ಮಾಡಿರುವ ಟ್ವೀಟ್‌

ಮಂಡ್ಯ ಮತ್ತು ಧಾರವಾಡದ ಕಾರ್ಯಕ್ರಮಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರ್ನಾಟಕಕ್ಕೆ ಆಗಮಿಸಿದ್ದರು. ಮಂಡ್ಯದಲ್ಲಿ ಆಯೋಜಿಸಿದ್ದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆಂದು ಮೈಸೂರಿಗೆ ಬಂದಿಳಿದಿದ್ದ ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡ ಬಿಜೆಪಿ ನಾಯಕರ ನಿಯೋಗದಲ್ಲಿ ಫೈಟರ್‌ ರವಿ ಎಂಬುವವರು ಇದ್ದರು ಎನ್ನಲಾಗಿದ್ದು, ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ADVERTISEMENT

‘ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ, ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು’ ಎಂದು ಕಿಡಿ ಕಾರಿದೆ.

ನಾಗಮಂಗಲದ ಬಿಜೆಪಿ ಟಿಕೆಟ್‌ ಆಕಾಂಕ್ಷಿ

ಕಳೆದೆರಡು ವರ್ಷಗಳಿಂದ ಮಂಡ್ಯದ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮಲ್ಲಿಕಾರ್ಜುನ್‌ ಅಲಿಯಾಸ್‌ ಫೈಟರ್‌ ರವಿ ಎಂಬುವವರು 2022ರ ನವೆಂಬರ್‌ 28ರಂದು ಸಚಿವ ಅಶ್ವತ್ಥ ನಾರಾಯಣ, ನಾರಾಯಣಗೌಡ, ಗೋಪಾಲಯ್ಯ ಅವರ ಸಮ್ಮುಖದಲ್ಲಿ ಮಂಡ್ಯದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇವರೊಂದಿಗೆ ಸುಮಲತಾ ಅವರ ಬೆಂಬಲಿಗ ಎನ್ನಲಾದ ಸಚ್ಚಿದಾನಂದ ಅವರು ಬಿಜೆಪಿ ಸೇರಿದ್ದರು.

ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಸೌಲಭ್ಯ ಒದಗಿಸಿರುವ ಫೈಟರ್‌ ರವಿ ನಾಗಮಂಗಲ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ.

ಇತ್ತೀಚೆಗೆ ನಾಗಮಂಗಲ ತಲುಪಿದ್ದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ್ದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ’ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಕ್ಷೇತ್ರಗಳಲ್ಲಿ ಕಮಲ ಅರಳುವ ಮೂಲಕ ನಮಗೆ ಗೆಲುವು ನೀಡಿ ರಾಜ್ಯ ಬಿಜೆಪಿಗೆ ಬಲ ನೀಡುತ್ತದೆ. ನಾಗಮಂಗಲ ತಾಲ್ಲೂಕಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ್ ಫೈಟರ್ ರವಿ ಅವರ ಗೆಲುವು ನಿಶ್ಚಿತ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.