
ಬೆಂಗಳೂರು: ‘ಜಿ ರಾಮ್ ಜಿ’ ಮಸೂದೆಯಲ್ಲಿ ರಾಮನನ್ನು ಮಹಾತ್ಮಾ ಗಾಂಧಿಯಿಂದ ಬೇರೆ ಮಾಡಲು ಕಾಂಗ್ರೆಸ್ ಬಯಸುತ್ತಿದೆ. ಕಾಂಗ್ರೆಸ್ಸಿಗರು ಗಾಂಧಿ ಹೆಸರಿನ ರಾಜಕೀಯ ಫಲಾನುಭವಿಗಳು’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಸುದ್ದಿ ಮಾಧ್ಯಮವೊಂದರ ಪಾಡ್ ಕಾಸ್ಟ್‌ನಲ್ಲಿ ಮಾತನಾಡಿರುವ ಅವರು, ‘ನರೇಗಾ ಯೋಜನೆಯಲ್ಲಿನ ಲೋಪಗಳನ್ನು ಸರಿಪಡಿಸುವ ದಿಟ್ಟ ನಿರ್ಧಾರವನ್ನು ಪ್ರಧಾನಿ ತೆಗೆದುಕೊಂಡಿದ್ದಾರೆ’ ಎಂದಿದ್ದಾರೆ.
‘ಸದನದಲ್ಲಿ ವಿರೋಧ ಪಕ್ಷವಾಗಿ ಚರ್ಚೆಯಲ್ಲಿ ಭಾಗವಹಿಸಿ ಸರ್ಕಾರದ ಉತ್ತರ ಕೇಳದೆ ಗದ್ದಲ ಮಾಡುವ ಮೂಲಕ ಕಾಂಗ್ರೆಸ್ ಕ್ಷಮಿಸಲಾರದ ತಪ್ಪು ಮಾಡಿದೆ. ಕಾಂಗ್ರೆಸ್‌ನವರು ಸಂಬಂಧವೇ ಇಲ್ಲದ ಎಸ್‌ಐಆರ್ ಬಗ್ಗೆ ಗೊಂದಲ ಸೃಷ್ಟಿಸಿ ಕಲಾಪ ಹಾಳು ಮಾಡಿದರು’ ಎಂದೂ ಹೇಳಿದ್ದಾರೆ.
‘ಗಾಂಧೀಜಿಯ ಆತ್ಮ ಮತ್ತು ಹೃದಯ ಎರಡೂ ರಾಮ ಆಗಿದ್ದ, ಅದು ಈಗ ಸಾಕಾರಗೊಂಡಿದೆ. ನರೇಗಾ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಲೋಪಗಳು ಕಂಡುಬಂದಿದ್ದವು. ಹೊಸ ಮಸೂದೆಯಲ್ಲಿ ಸಾಕಷ್ಟು ಪ್ರಗತಿಪರ ಚಿಂತನೆಗಳನ್ನು ಅಳವಡಿಸಲಾಗಿದೆ. ಪ್ರತಿ ವರ್ಷ ₹ 1 ಲಕ್ಷ ಕೋಟಿಯನ್ನು ಈ ಯೋಜನೆಗೆ ನೀಡಲಾಗುತ್ತಿದೆ’ ಎಂದಿದ್ದಾರೆ.
‘ಬಡವರಿಗೆ ಮೀಸಲಿಟ್ಟ ಹಣ ಅವರಿಗೆ ತಲುಪಿಸಲು ತಾಂತ್ರಿಕವಾಗಿ ಕಾಯ್ದೆ ಬಲಗೊಳಿಸಲಾಗಿದೆ. ನೂರು ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ನೂರು ದಿನಗಳ ಅನುದಾನವನ್ನು ಕೇಂದ್ರ ಸರ್ಕಾರ ಕೊಡುತ್ತದೆ. 25 ದಿನಗಳ ಅನುದಾನವನ್ನು ರಾಜ್ಯ ಸರ್ಕಾರ ಕೊಡಬೇಕು ಎಂದು ಹೇಳಿದೆ. ರಾಜ್ಯ ಸರ್ಕಾರಗಳು ಗ್ಯಾರೆಂಟಿ ಯೋಜನೆಗಳನ್ನು ನೀಡುವುದರಲ್ಲಿ ಸಕ್ರಿಯವಾಗಿವೆ. ಜನರ ಹಣವನ್ನು ಹಂಚುವುದು ಸರಳ. ಆದರೆ, ಒಂದು ಯೋಜನೆ ರೂಪಿಸಿ ಆಸ್ತಿ ಸೃಷ್ಟಿಸುವುದು ಕಷ್ಟ. ಇತ್ತೀಚೆಗೆ ರಾಜ್ಯಗಳು ದೀರ್ಘಕಾಲದ ಯೋಜನೆಗಳನ್ನು ಮಾಡುವುದನ್ನು ಮರೆತಿವೆ. ಆದರೆ, ಗ್ರಾಮೀಣ ಆರ್ಥಿಕತೆ ಬೆಳೆಯಲು ರಾಜ್ಯಗಳು ತಮ್ಮ ಪಾಲು ನೀಡಬೇಕು’ ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.