ADVERTISEMENT

ಮೇಕೆದಾಟು ಯೋಜನೆ | ತಮಿಳುನಾಡು ನಿರ್ಣಯದ ವಿರುದ್ಧ ಪಕ್ಷ ಭೇದ ಮರೆತು ಒಂದಾದ ನಾಯಕರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 10:53 IST
Last Updated 22 ಮಾರ್ಚ್ 2022, 10:53 IST
   

ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆ ಕೈಗೊಂಡಿರುವ ನಿರ್ಣಯವನ್ನು ಕರ್ನಾಟಕ ವಿಧಾನಸಭೆಯಲ್ಲಿ ಪಕ್ಷ ಭೇದ ಮರೆತು ಕಟುವಾಗಿ ವಿವಿಧ ಪಕ್ಷಗಳ ನಾಯಕರು ಟೀಕಿಸಿದ್ದು, ಮೇಕೆದಾಟು ಯೋಜನೆ ಅಡ್ಡಿ ಮಾಡುತ್ತಿರುವ ತಮಿಳುನಾಡಿನ ವಿರುದ್ಧ ಬುಧವಾರ ನಿರ್ಣಯ ಅಂಗೀಕರಿಸಲು ನಿರ್ಧರಿಸಲಾಯಿತು.

ವಿಧಾನಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಎಚ್.ಕೆ.ಪಾಟೀಲ ವಿಷಯ ಪ್ರಸ್ತಾಪಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಅವರು ತಮಿಳುನಾಡಿನ ಧೋರಣೆಯನ್ನು ಕಟುವಾಗಿ ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ನಾಡಿನ ನೆಲ, ಜಲ, ಭಾಷೆ ಮತ್ತು ಗಡಿ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದು. ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳುವ ಮೊದಲು ಕಾನೂನು ತಜ್ಞರ ಜತೆ ಮಾತುಕತೆ ನಡೆಸುತ್ತೇನೆ. ನಾಳೆಯೇ ನಿರ್ಣಯ ಮಂಡಿಸುತ್ತೇನೆ’ ಎಂದರು.

‘ತಮಿಳುನಾಡು ವಿಧಾನಸಭೆಯ ನಿರ್ಣಯ ರಾಜ್ಯದ ಹಕ್ಕಿನ ಮೇಲೆ ನಡೆಸಿರುವ ಗದಾ ಪ್ರಹಾರ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧ. ಮೇಕೆದಾಟು ಯೋಜನೆ ಜಾರಿ ಮಾಡಿಯೇ ತೀರುತ್ತೇವೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದರ ಜತೆ ಅಗತ್ಯಬಿದ್ದರೆ ಕೇಂದ್ರಕ್ಕೆ ನಿಯೋಗವನ್ನು ಒಯ್ಯಲಾಗುವುದು. ನೀರಿಗಾಗಿ ತಮಿಳುನಾಡು ಸರ್ಕಾರ ಕಾಲು ಕೆರೆದುಕೊಂಡು ಬರುವುದನ್ನು ನಾವು ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ADVERTISEMENT

ನಮ್ಮ ಪಾಲಿಗೆ ಬಂದ ನೀರನ್ನು ಸದ್ಬಳಕೆ ಮಾಡಲು ನಾವು ಬದ್ಧರಾಗಿದ್ದೇವೆ. ಅದಕ್ಕಾಗಿ ಮೇಕೆದಾಟು ಯೋಜನೆ ಹಮ್ಮಿಕೊಳ್ಳಲಾಗಿದೆ. ನಾವು ಈ ಯೋಜನೆಯ ಮೂಲಕ ಬೆಂಗಳೂರು ನಗರದ ಜನರ ಕುಡಿಯುವ ಉದ್ದೇಶಕ್ಕಾಗಿ ಬಳಸುತ್ತಿದ್ದೇವೆ. ಇದಕ್ಕೆ ತಮಿಳುನಾಡು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳುವ ಪ್ರಯತ್ನ ಅಂತಿಮ ಹಂತದಲ್ಲಿದೆ ಎಂದರು.

ಚೆನ್ನೈ ನಗರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಆದಾಗ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳು ಸೇರಿ ತೆಲುಗು ಗಂಗಾ ಯೋಜನೆಯ ಮೂಲಕ ಅಲ್ಲಿಗೆ ನೀರು ಒದಗಿಸಲಾಯಿತು. ರಾಜ್ಯದ ಕೃಷ್ಣಾ ನದಿಯಿಂದ ನೀರಿನ ಪಾಲು ತೆಲುಗು ಗಂಗಾಗೆ ನೀಡಿದ್ದೇವೆ. ಈಗ ಅವರು ನಮ್ಮ ಯೋಜನೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ತರಾಟೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.