ADVERTISEMENT

ನಾಯಿ–ನರಿಗಳಂತೆ ಕಚ್ಚಾಡುತ್ತಿದ್ದಾರೆ ಕಾಂಗ್ರೆಸ್ ನಾಯಕರು: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 7:53 IST
Last Updated 2 ನವೆಂಬರ್ 2023, 7:53 IST
<div class="paragraphs"><p>ಬಿ.ಎಸ್‌ ಯಡಿಯೂರಪ್ಪ</p></div>

ಬಿ.ಎಸ್‌ ಯಡಿಯೂರಪ್ಪ

   

ಬೆಂಗಳೂರು: ಕಾಂಗ್ರೆಸ್‌ ಪಕ್ಷದಲ್ಲಿ ನಾಯಕರು ನಾಯಿ– ನರಿಗಳಂತೆ ಕಚ್ಚಾಡುತ್ತಿದ್ದು, ಅದನ್ನು ನಿಲ್ಲಿಸಿ, ಆಡಳಿತದ ಕಡೆ ಗಮನಕೊಡಿ ಎಂದು ಕಿವಿ ಹಿಂಡಲು ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ಬಂದಿದ್ದಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷದ ಹುಳುಕುಗಳನ್ನು ಮುಚ್ಚಿಕೊಳ್ಳಲು ಮತ್ತು ಗಮನ ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರ ಅಸ್ಥಿರಗೊಳಿಸಲಾಗುತ್ತಿದೆ ಎಂಬ ನಾಟಕ ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಬರದ ವಿಚಾರದಲ್ಲಿ ಪ್ರಧಾನಿಯವರು ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ, ಮುಖ್ಯಮಂತ್ರಿ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ದಿನ ಬೆಳಗ್ಗೆ ಎದ್ದರೆ ಸಾಮಾಜಿಕ ಜಾಲತಾಣದ ಮೂಲಕ  ಮೋದಿಯವರನ್ನು ಬಾಯಿಗೆ ಬಂದಂತೆ ಟೀಕಿಸುತ್ತಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಪ್ರಧಾನಿಯವರನ್ನು ಘನತೆ ಮತ್ತು ಗೌರವದಿಂದ ವರ್ತಿಸುತ್ತಿಲ್ಲ. ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಾ ಅಗೌರವದಿಂದ ಕಂಡರೆ, ಭೇಟಿಗೆ ಯಾರು ಅವಕಾಶ ಕೊಡುತ್ತಾರೆ. ಗೌರವದಿಂದ ವರ್ತಿಸಿದರೆ ಎರಡು ದಿನ ಕಾದರೆ ಭೇಟಿಗೆ ಅವಕಾಶ ಕೊಡುತ್ತಾರೆ ಎಂದು ಹೇಳಿದರು.

ಬಿಜೆಪಿ ನಾಯಕರು ಬರ ಪ್ರದೇಶಕ್ಕೆ ಏಕೆ ಹೋಗಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಅವರ ಘನತೆಗೆ ತಕ್ಕುದಲ್ಲ. ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಜನರ ಸಂಕಷ್ಟವನ್ನು ತಿಳಿದು ಕೇಂದ್ರಕ್ಕೆ ಮನವರಿಕೆ ಮಾಡಲು ಹೋಗುತ್ತಿದ್ದೇವೆ ಮತ್ತು ನಮ್ಮ ಜವಾಬ್ದಾರಿಯೂ ಆಗಿದೆ. ಸಿದ್ದರಾಮಯ್ಯ ಆಗಲಿ ಅವರ ಮಂತ್ರಿ ಮಂಡಲದ ಸದಸ್ಯರಾಗಲೀ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಯಿತು. ಚಕ್ರದಲ್ಲಿ ಗಾಳಿ ಇಲ್ಲದೇ ಗಾಡಿ ಮುಂದಕ್ಕೇ ಹೋಗುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೂ ಒಂದು ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಗ್ಯಾರಂಟಿಗಳಿಗೆ ಹಣ ಹೊಂದಾಣಿಕೆ ಮಾಡಲು ಒದ್ದಾಟ ನಡೆಸುತ್ತಿದ್ದಾರೆ. ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಯಡಿಯೂರಪ್ಪ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.