ನವದೆಹಲಿ; ‘ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಲಂಚ ನಡೆಯುತ್ತಿದೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್. ಪಾಟೀಲ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.
ರಾಷ್ಟ್ರಪತಿ ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಲು ನವದೆಹಲಿಗೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಮಂಗಳವಾರ ಭೇಟಿ ಮಾಡಿ ಸಮಾಲೋಚಿಸಿದರು. ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಸ್ವಪಕ್ಷೀಯರೇ ಧ್ವನಿ ಎತ್ತಿರುವ ಬಗ್ಗೆ ಪ್ರಸ್ತಾಪಿಸಿದ ಹೈಕಮಾಂಡ್ ನಾಯಕರು, ‘ಬಿ.ಆರ್.ಪಾಟೀಲ ಅಸಮಾಧಾನವನ್ನು ಆರಂಭದಲ್ಲೇ ಶಮನ ಮಾಡಬೇಕಿತ್ತು. ಅವರನ್ನು ಕರೆಸಿ ಅಹವಾಲು ಆಲಿಸಬೇಕಿತ್ತು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ’ ಎಂದು ಕಿವಿಮಾತು ಹೇಳಿದರು.
ಆಗ ಸಿದ್ದರಾಮಯ್ಯ, ‘ಪಾಟೀಲ ಅವರಿಗೆ ಭಾನುವಾರವೇ ಕರೆ ಮಾಡಿ ಭೇಟಿ ಮಾಡುವಂತೆ ತಿಳಿಸಿದ್ದೆ. ಬುಧವಾರ ಬರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿಗೆ ತೆರಳಿದ ಕೂಡಲೇ ಅವರೊಂದಿಗೆ ಚರ್ಚೆ ನಡೆಸುವೆ’ ಎಂದು ರಾಷ್ಟ್ರೀಯ ನಾಯಕರಿಗೆ ತಿಳಿಸಿದರು. ‘ಸರ್ಕಾರದ ಕಾರ್ಯಶೈಲಿ ವಿರುದ್ಧ ಹೇಳಿಕೆ ನೀಡುವ ಶಾಸಕರ ಸಂಖ್ಯೆ ಹೆಚ್ಚುತ್ತಿದೆ. ಇದು ವಿಪಕ್ಷಗಳಿಗೆ ಆಹಾರವಾಗುತ್ತಿದೆ. ಶಾಸಕರು ತಮ್ಮ ದುಗುಡ ಏನಿದ್ದರೂ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಜತೆಗೆ ಹೇಳಿಕೊಳ್ಳಬೇಕು. ಅದು ಬಿಟ್ಟು ಬಹಿರಂಗ ಹೇಳಿಕೆ ನೀಡಿದರೆ ಹೈಕಮಾಂಡ್ ಶಿಸ್ತುಕ್ರಮ ಕೈಗೊಳ್ಳಲಿದೆ’ ಎಂದು ಹೈಕಮಾಂಡ್ ನಾಯಕರು ಎಚ್ಚರಿಸಿದರು ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಬುಧವಾರ ಬೆಳಿಗ್ಗೆ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ. ರಾಹುಲ್ ಅವರನ್ನು ಸಿದ್ದರಾಮಯ್ಯ ಮುಂದಿನ ವಾರ ಭೇಟಿ ಮಾಡಲಿದ್ದಾರೆ. ಆ ಬಳಿಕ ಸುರ್ಜೇವಾಲಾ ಅವರು ರಾಜ್ಯಕ್ಕೆ ಭೇಟಿ ಮಾಡಿ ರಾಜ್ಯ ನಾಯಕರು ಹಾಗೂ ಶಾಸಕರ ಜತೆಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ವಿಧಾನ ಪರಿಷತ್‌ಗೆ ನಾಲ್ವರು ಸದಸ್ಯರ ನಾಮನಿರ್ದೇಶನ ಪ್ರಕ್ರಿಯೆ ಬಾಕಿ ಇದೆ. ಈ ಪಟ್ಟಿಯನ್ನು ಪರಿಷ್ಕರಣೆ ಮಾಡುವಂತೆ ಹೈಕಮಾಂಡ್ ಈ ಹಿಂದೆಯೇ ಸೂಚಿಸಿದೆ. ಪಟ್ಟಿ ಪರಿಷ್ಕರಣೆ ಮಾಡಿದರೆ ಇನ್ನಷ್ಟು ಗೊಂದಲ ಸೃಷ್ಟಿಯಾಗಲಿದ್ದು, ಈ ಪಟ್ಟಿಯನ್ನೇ ಅಂತಿಮಗೊಳಿಸುವುದು ಸೂಕ್ತ’ ಎಂದು ಮುಖ್ಯಮಂತ್ರಿಯವರು ಹೈಕಮಾಂಡ್ ನಾಯಕರ ಗಮನಕ್ಕೆ ತಂದರು ಎಂದು ಗೊತ್ತಾಗಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಖರ್ಗೆ ಅವರಲ್ಲಿ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಈ ಸ್ಥಾನಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಅಥವಾ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ನೇಮಿಸುವುದು ಸೂಕ್ತ ಎಂದರು. ಈ ಬಗ್ಗೆ ಹೈಕಮಾಂಡ್ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಖರ್ಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.
ಐದು ವರ್ಷವೂ ಸಿದ್ದರಾಮಯ್ಯ ಸಿಎಂ: ರಾಯರಡ್ಡಿ
‘ಮುಂದಿನ ಮೂರು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದರು. ಸುದ್ದಿಗಾರರ ಜತೆಗೆ ಮಾತನಾಡಿದ ಅವರು ‘ಕೆಲವರು ಮಾನಸಿಕ ನೆಮ್ಮದಿಗೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿರುತ್ತಾರೆ. ಸಿದ್ದರಾಮಯ್ಯ ಅವರಿಗೆ ಬಹುತೇಕ ಶಾಸಕರ ಬೆಂಬಲ ಇದೆ. ಜುಲೈನಲ್ಲಿ ಮುಖ್ಯಮಂತ್ರಿಯವರು ಇನ್ನಷ್ಟು ಉತ್ತಮ ಆಡಳಿತ ನೀಡಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.