ADVERTISEMENT

‘ಮೈತ್ರಿ’ ಸರ್ಕಾರದ ಪೆಟ್ಟು ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 20:06 IST
Last Updated 27 ಜೂನ್ 2019, 20:06 IST
   

ಬೆಂಗಳೂರು: ‘ಮೈತ್ರಿ’ ಸರ್ಕಾರದಿಂದ ಕಾಂಗ್ರೆಸ್‌ಗೆ ಹಿನ್ನಡೆ ಆಗದಂತೆ ಎಚ್ಚರ ವಹಿಸಲು ಸಚಿವರು, ಶಾಸಕರು ಹಾಗೂ ಮುಖಂಡರಿಗೆ ಪಕ್ಷದ ಹೈಕಮಾಂಡ್ ಸೂಚಿಸಿದೆ.

ಜೆಡಿಎಸ್– ಕಾಂಗ್ರೆಸ್ ಹೊಂದಾಣಿಕೆಯಿಂದಾಗಿ ಸರ್ಕಾರ ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿದರೆ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ನಕಾರಾತ್ಮಕಪರಿಣಾಮ ಬೀರುವಂತಿದ್ದರೆ, ಅದನ್ನು ತಡೆಯಲು ಕ್ರಮ ವಹಿಸುವುದು. ಅಂತಹ ಅಭಿಪ್ರಾಯದಿಂದ ಪಕ್ಷದ ಮೇಲೆ ಯಾವುದೇ ರೀತಿಯಲ್ಲೂಪರಿಣಾಮವಾಗದಂತೆ ನೋಡಿಕೊಳ್ಳುವಂತೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ರಾಜ್ಯದ ಪ್ರಮುಖರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಮೈತ್ರಿ ಸರ್ಕಾರ ಉರುಳಿದರೆ ಆ ಅಪವಾದವೂ ಕಾಂಗ್ರೆಸ್ ಮೇಲೆ ಬರದಂತೆ ನೋಡಿಕೊಳ್ಳಬೇಕು. ಸಮ್ಮಿಶ್ರ ಸರ್ಕಾರ ರಚನೆ ಮಾಡಿರುವುದರಿಂದ ಈ ಹಂತದಲ್ಲಿ ಹಿಂದೆ ಸರಿಯುವುದು ಸರಿಯಲ್ಲ. ಸರ್ಕಾರ ಉಳಿಸಿಕೊಂಡು, ಉತ್ತಮ ಆಡಳಿತ ನೀಡಬೇಕು. ಒಂದು ವೇಳೆ ಜೆಡಿಎಸ್ ನಾಯಕರ ಕಾರಣಕ್ಕೆ ಬಿದ್ದರೆ, ಪಕ್ಷದ ಮೇಲೆ ಆರೋಪ ಬರಬಾರದು. ಕಾಂಗ್ರೆಸ್ ಉರುಳಿಸಿತು ಎಂಬ ಭಾವನೆ ಜನರಲ್ಲಿ ಮೂಡದಂತೆ ಎಚ್ಚರಿಕೆಯಿಂದ ಇರಲು ಸಲಹೆಗಳನ್ನು ನೀಡಲಾಗಿದೆ ಎಂದುಮೂಲಗಳು ತಿಳಿಸಿವೆ.

ADVERTISEMENT

ಸಚಿವ ಸಂಪುಟ ಸಭೆಗೂ ಮುನ್ನ ಕಾಂಗ್ರೆಸ್ ಸಚಿವರೊಬ್ಬರ ಮನೆಯಲ್ಲಿ ತಿಂಡಿ ತಿಂದು, ಸಭೆಗೆ ಬರುವ ವಿಷಯಗಳ ಬಗ್ಗೆ ಚರ್ಚಿಸಿ, ನಂತರ ಸಂಪುಟದಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಲಾಗುತಿತ್ತು. ಇತ್ತೀಚೆಗೆ ಈ ಸಂಪ್ರದಾಯ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ.

ಶಾಸಕರಿಗೆ ಸೂಚನೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಗೊಂಡಿರುವ ಗ್ರಾಮ ವಾಸ್ತವ್ಯ ಒಂದು ರೀತಿಯಲ್ಲಿ ಜೆಡಿಎಸ್ ಕಾರ್ಯಕ್ರಮದಂತೆ ಕಂಡುಬರುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿಲ್ಲ. ಪಕ್ಷಕ್ಕೆ ಯಾವುದೇ ರೀತಿಯಲ್ಲೂ ಸಹಕಾರಿ ಆಗುತ್ತಿಲ್ಲ. ಹಾಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದ್ದು, ಶಾಸಕರು ಹೆಚ್ಚಿನ ಸಮಯ ಕ್ಷೇತ್ರದಲ್ಲೇ ಇದ್ದು, ಜನರ ಜೊತೆಗೆ ಬೆರೆತು ಕೆಲಸ ಮಾಡಬೇಕು. ಇದರಿಂದಾಗಿ ಮುಂದಿನ ದಿನಗಳಲ್ಲಿ ಚುನಾವಣೆ ಎದುರಿಸಲು ಸಹಕಾರಿಯಾಗುತ್ತದೆ ಎಂಬ ಸಲಹೆ ನೀಡಲಾಗಿದೆ.

ವಿವಿಧ ನಿಗಮ– ಮಂಡಳಿಗಳ 800 ಸ್ಥಾನಗಳಲ್ಲಿ ಕಾಂಗ್ರೆಸ್‌ ಪಾಲಿಗೆ 500 ಸ್ಥಾನಗಳು ಲಭ್ಯವಾಗಲಿದ್ದು, ಅಷ್ಟು ಮಂದಿಗೆ ಅಧಿಕಾರ ಕಲ್ಪಿಸಲು ವರಿಷ್ಠರು ಮುಂದಾಗಿದ್ದಾರೆ.

80 ಮಂದಿ ತಂಡ

ಕೆಪಿಸಿಸಿ ಪದಾಧಿಕಾರಿಗಳ ನೇಮಕಕ್ಕೆ ಚಾಲನೆ ನೀಡಲಾಗಿದ್ದು, ಈ ಸಲದ ಸಮಿತಿಯು 80 ಮೀರದಂತೆ ನೋಡಿಕೊಳ್ಳಲು‍ಪಕ್ಷ ಚಿಂತನೆ ನಡೆಸಿದೆ.

ಹಿಂದಿನ ಸಲ ಗಜಗಾತ್ರದ ಸಮಿತಿ ಇದ್ದರೂ ಪಕ್ಷದ ಬೆಳವಣಿಗೆಗೆ ಸಹಕಾರಿಯಾಗಿಲ್ಲ. ಅದಕ್ಕಾಗಿ ಈ ಸಲ ಪಕ್ಷ ನಿಷ್ಠರನ್ನು ಮಾತ್ರ ನೇಮಕ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ನಾಯಕರು ಶಿಫಾರಸು ಮಾಡಿದವರಿಗೂ ಅವಕಾಶ ನೀಡುತ್ತಿಲ್ಲ. ಅರ್ಹತೆಯನ್ನೇ ಮಾನದಂಡವನ್ನಾಗಿ ಪರಿಗಣಿಸಲಾಗುತ್ತಿದ್ದು, ಚಿಕ್ಕದಾದ, ಚೊಕ್ಕದಾದ ಯುವಕರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.