ADVERTISEMENT

ರೈತರ ಹೋರಾಟಕ್ಕೆ ಕಾಂಗ್ರೆಸ್ ಷಡ್ಯಂತ್ರ ಕಾರಣ: ಸಿಎಂ ಯಡಿಯೂರಪ್ಪ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 20:34 IST
Last Updated 19 ಡಿಸೆಂಬರ್ 2020, 20:34 IST
ಸಮಾರೋಪ ಭಾಷಣ ಮಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಸಮಾರೋಪ ಭಾಷಣ ಮಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು:‘ದೆಹಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿಂದೆ ಕಾಂಗ್ರೆಸ್‌ ಷಡ್ಯಂತ್ರವಿದೆ. ಅಧಿಕಾರ ಇಲ್ಲದೇ ಹತಾಶಗೊಂಡಿರುವ ಕಾಂಗ್ರೆಸ್‌, ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ರೂಪಿಸಿರುವ ಕಾಯ್ದೆಗಳ ವಾಸ್ತವತೆ ಮತ್ತು ಜನಪರ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಷಡ್ಯಂತ್ರಕ್ಕೆ ತಕ್ಕ ಉತ್ತರ ನೀಡಬೇಕು’ ಎಂದು ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವರು ಮನವಿ ಮಾಡಿದರು.

‘ಪ್ರಧಾನಿಯವರು ಕೈಮುಗಿದು ಕೇಳಿದರೂ ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಸತ್ಯಾಗ್ರಹ ನಡೆಸುತ್ತಿರುವವರು ಮಾತುಕತೆಗೆ ಬರುತ್ತಿಲ್ಲ. ಇದಕ್ಕೆ ಕಾಂಗ್ರೆಸ್‌ ಪಿತೂರಿಯೇ ಕಾರಣ’ ಎಂದು ಕಿಡಿಕಾರಿದರು.

ADVERTISEMENT

‘ದೇಶದ ಅತಿ ಹೆಚ್ಚು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ರೈತರ ಉತ್ಪನ್ನಗಳ ಇಳುವರಿ ಹೆಚ್ಚಳ ಮತ್ತು ಆದಾಯ ದುಪ್ಪಟ್ಟು ಮಾಡಲು ಪ್ರಧಾನಿ ಮೋದಿ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ’ ಎಂದು ಯಡಿಯೂರಪ್ಪ ಹೇಳಿದರು.

ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಕನಿಷ್ಠ ಬೆಂಬಲ ಬೆಲೆಯಡಿ ರೈತರ ಉತ್ಪನ್ನಗಳ ಖರೀದಿಗೆ ಮೋದಿ ಸರ್ಕಾರ ಆರು ವರ್ಷಗಳಲ್ಲಿ ₹ 8 ಲಕ್ಷ ಕೋಟಿ ವ್ಯಯಿಸಿದೆ. ಯುಪಿಎ ಅವಧಿಯಲ್ಲಿ 10 ವರ್ಷಗಳಲ್ಲಿ ₹3.5 ಲಕ್ಷ ಕೋಟಿ ಬಳಸಿತ್ತು ಎಂದು ಯಡಿಯೂರಪ್ಪ ತಿಳಿಸಿದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿದರು.

‘ಮತ್ತೊಂದು ಜೆ.ಪಿ. ಚಳವಳಿ ಅನಿವಾರ್ಯ’
ಬೆಂಗಳೂರು:
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ನಾಲ್ಕನೇ ದಿನ ಪೂರೈಸಿದೆ.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ರೈತ–ದಲಿತ–ಕಾರ್ಮಿಕರ ಐಕ್ಯ ಹೋರಾಟ ಹಾಗೂ ಎಡ ವಿದ್ಯಾರ್ಥಿ, ಯುವಜನ ಹಾಗೂ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಈ ಧರಣಿ ಹಮ್ಮಿಕೊಳ್ಳಲಾಗಿದೆ.

ಹೋರಾಟಗಾರ ಪ. ಮಲ್ಲೇಶ್ ಮಾತನಾಡಿ, ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅನಾಗರಿಕ ಹಾಗೂ ಅನೈತಿಕ
ಕಾನೂನುಗಳನ್ನು ಜನರ ಮೇಲೆ ಹೇರುತ್ತಿದೆ. ಇದರ ವಿರುದ್ದ ಪ್ರತಿಭಟಿಸುತ್ತಿರುವ ರೈತರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ. ದೇಶದಲ್ಲಿ ರೈತರು ಮತ್ತು ಕಾರ್ಮಿಕರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಇನ್ನೊಂದು ಜೆ.ಪಿ ಚಳವಳಿ ನಡೆಸಬೇಕಾದ ಅನಿವಾರ್ಯ ಇದೆ’ ಎಂದರು.

ಹೋರಾಟಗಾರ ಎಸ್.ಆರ್.ಹಿರೇಮಠ, ‘ಸರ್ಕಾರದ ನೀತಿಗಳು, ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಮೇಲೆಯೇ ಪ್ರಹಾರ ಮಾಡುತ್ತಿವೆ. ಯಾವುದೇ ಸಾಂವಿಧಾನಿಕ ಚರ್ಚೆಗೆ ಅವಕಾಶ ನೀಡದೆ ಏಕಾಏಕಿ ಕಾಯ್ದೆಯನ್ನು ಹೇರಲಾಗಿದೆ’ ಎಂದು ದೂರಿದರು.

‘ಭೂ ಸುಧಾರಣಾ ಕಾಯ್ದೆ, ರೈತರಿಗೆ ಮರಣ ಶಾಸನ. ಈ ಕಾಯ್ದೆ ರೈತ ವಿರೋಧಿ ಮಾತ್ರವಲ್ಲ, ಜನ ವಿರೋಧಿಯೂ ಹೌದು. ಇದರ ವಿರುದ್ಧ ಪ್ರಬಲ ಹೋರಾಟ ಅಗತ್ಯ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.