ADVERTISEMENT

ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ:‌ ಘೋಷಣೆ ಕೂಗುತ್ತ ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 6:45 IST
Last Updated 8 ಮಾರ್ಚ್ 2021, 6:45 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ರಾಜ್ಯ ಸರ್ಕಾರದ ನೈತಿಕತೆ ಕಳೆದುಕೊಂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಬಜೆಟ್‌ ದಿಕ್ಕರಿಸಿ ಸಭಾತ್ಯಾಗ ಮಾಡಿದೆ.

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್‌ ಸದಸ್ಯರು, ಸಿದ್ದರಾಮಯ್ಯ ನೇತೃತ್ವದಲ್ಲಿ ಸದನದಿಂದ ಹೊರ ನಡೆದರು.

ಇದಕ್ಕೂ ಮೊದಲು ಪತ್ರಿಕಾಗೋಷ್ಠಿ ನಡೆಸಿದ್ದ ಸಿದ್ದರಾಮಯ್ಯ,ರಾಜ್ಯದಲ್ಲಿ ಇರುವುದು ಅನೈತಿಕತೆ ಮೂಟೆ ಹೊತ್ತುಕೊಂಡ ಸರ್ಕಾರ. ಈ ಅಕ್ರಮ, ಅನೈತಿಕತೆಯನ್ನು ಪ್ರತಿಭಟಿಸಿ ಬಜೆಟ್‌ ವೇಳೆ ಸಭಾತ್ಯಾಗ ಮಾಡುವುದಾಗಿ ತಿಳಿಸಿದ್ದರು.

ADVERTISEMENT

' ವಸತಿ ಯೋಜನೆಗೆ ಮಂಜೂರಾದ ಭೂಮಿಯ 26 ಎಕರೆ ಅವ್ಯವಹಾರದ ಬಗ್ಗೆ ಲೋಕಾಯುಕ್ತದಲ್ಲಿ ದಾಖಲಾಗಿದ್ದ ಪ್ರಕರಣ ರದ್ದತಿಗಾಗಿ ಯಡಿಯೂರಪ್ಪ ಮತ್ತು ಮುರುಗೇಶ ನಿರಾಣಿ ಹೈಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣ ರದ್ದು ಮಾಡದ ಹೈಕೋರ್ಟ್‌ ವಿಚಾರಣೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋದರು. ಅಲ್ಲಿ, ಬಂಧನದಿಂದ ರಕ್ಷಣೆ ದೊರೆತಿದೆ. ಇವರೆಲ್ಲ ಜಾಮೀನಿನ ಮೇಲಿದ್ದಾರೆ,' ಎಂದು ಅವರು ಕುಹಕವಾಡಿದರು.

'ತಮ್ಮ ವಿರುದ್ಧದ ಮಾನಹಾನಿಕರ ಸುದ್ದಿ ವರದಿ ಮಾಡದಂತೆ ರಾಜ್ಯದ ಆರು ಸಚಿವರು ಕೋರ್ಟ್‌ ಮೊರೆ ಹೋಗಿ ತಾತ್ಕಾಲಿಕ ತಡೆ ತಂದಿದ್ದಾರೆ. ಇನ್ನೂ ಹಲವರು ಕೋರ್ಟ್‌ಗೆ ಹೋಗುವ ಸಾಧ್ಯತೆಗಳಿವೆ. 19 ಸಿಡಿಗಳಿವೆ ಎಂದು ಅವರೇ ಅರ್ಜಿಯಲ್ಲಿ ಹೇಳಿದ್ದಾರೆ. ಹಾಗಿದ್ದರೆ, ತಪ್ಪಾಗಿದೆ ಎಂದು ಅರ್ಥ ಅಲ್ಲವೇ?,' ಎಂದು ಅವರು ಪ್ರಶ್ನಿಸಿದರು.

ತಮ್ಮ ವಿರುದ್ಧದ ಸುದ್ದಿಗಳಿಗೆ ತಡೆ ತರುವ ಮೂಲಕ ಮಾಧ್ಯಮಗಳ ವಾಕ್‌ ಸ್ವಾತಂತ್ರ್ಯವನ್ನು ಹರಣ ಮಾಡಲಾಗಿದೆ,' ಎಂದು ಅವರು ಆರೋಪಿಸಿದರು.

ಈ ಎಲ್ಲ ಪ್ರಕರಣಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಇದು ಅನೈತಿಕತೆಯ ಮೂಟೆ ಹೊತ್ತ ಸರ್ಕಾರ ಎಂದು ಟೀಕಿಸಿದರು.

'ಸಚಿವ ಗೋಪಾಲಯ್ಯ ಅವರು ನಾನೇನು ತಪ್ಪು ಮಾಡಿಲ್ಲ ಎಂದಿದ್ದಾರೆ. ಹಾಗಾದರೆ ಇವರೆಲ್ಲರೂ ಯಾಕೆ ತಡೆ ತೆಗೆದುಕೊಂಡಿದ್ದಾರೆ. ಗೋಪಾಲಯ್ಯ ತಪ್ಪು ಮಾಡಿಲ್ಲ ಹಾಗಾಗಿಯೇ ಧೈರ್ಯವಾಗಿದ್ದಾರೆ. ಇವರಿಗೆ ಧೈರ್ಯವಿಲ್ಲ,' ಎಂದರು.

'ಮುಖ್ಯಮಂತ್ರಿ ಮತ್ತು ಸಚಿವರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದಾರೆ. ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವುದಾಗಿಯೂ, ಯಾರಿಗೂ ಭಯ ಪಡುವುದಿಲ್ಲ ಎಂದೂ, ಪಕ್ಷಪಾತ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ಈಗ ಭಯವಿರುವುದಾಗಿ ತಡೆ ತಂದಿದ್ದಾರೆ,' ಎಂದು ವ್ಯಂಗ್ಯವಾಡಿದರು.

ಸರ್ಕಾರದಲ್ಲಿ ಮುಖ್ಯಮಂತ್ರಿಗಾಗಲಿ, ಸಚಿವರಿಗಾಗಿ ನೈತಿಕತೆ ಇಲ್ಲ. ಅಧಿಕಾರದಲ್ಲಿ ಮುಂದುವರಿಯಲು ಇವರಿಗೆ ನೈತಿಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಇದೆಲ್ಲವನ್ನೂ ವಿರೋಧಿಸಿ ಕಾಂಗ್ರೆಸ್‌ ಬಜೆಟ್‌ ಮಂಡನೆ ವೇಳೆ ಸಭಾತ್ಯಾಗ ಮಾಡುವದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.