ADVERTISEMENT

ಈಶ್ವರಪ್ಪ ರಾಜೀನಾಮೆಗೆ ಪಟ್ಟು: ಪರಿಷತ್‌ನಲ್ಲಿ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 20:30 IST
Last Updated 17 ಫೆಬ್ರುವರಿ 2022, 20:30 IST
ವಿಧಾನಸೌಧದಲ್ಲಿ ವಿಧಾನಪರಿಷತ್ ನಲ್ಲಿ ಗುರುವಾರ ನಡೆದ ಕಲಾಪದಲ್ಲಿ ಸಭಾಪತಿ ಪೀಠದ ಮುಂದೆ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ವಿಧಾನಸೌಧದಲ್ಲಿ ವಿಧಾನಪರಿಷತ್ ನಲ್ಲಿ ಗುರುವಾರ ನಡೆದ ಕಲಾಪದಲ್ಲಿ ಸಭಾಪತಿ ಪೀಠದ ಮುಂದೆ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಕೆಂಪು ಕೋಟೆಯಲ್ಲೂ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿರುವ ಆರೋಪದ ಮೇಲೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡುವಂತೆ ಪಟ್ಟುಹಿಡಿದು ಕಾಂಗ್ರೆಸ್‌ ಸದಸ್ಯರು ಗುರುವಾರವೂ ವಿಧಾನ ಪರಿಷತ್‌ನಲ್ಲಿ ಧರಣಿ ಮುಂದುವರಿಸಿದ್ದು. ಇಡೀ ದಿನ ಕಾಂಗ್ರೆಸ್‌– ಬಿಜೆಪಿ ಸದಸ್ಯರ ವಾಕ್ಸಮರಕ್ಕೆ ಸದನ ವೇದಿಕೆಯಾಯಿತು.

ಬೆಳಿಗ್ಗೆ ಧರಣಿ ನಡುವೆಯೇ ಪ್ರಶ್ನೋತ್ತರ ಮುಗಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಮಧ್ಯಾಹ್ನ 3ಕ್ಕೆ ಕಲಾಪ ಮುಂದೂಡಿದರು. ಮಧ್ಯಾಹ್ನ ಮತ್ತೆ ಕಲಾಪ ಆರಂಭವಾದಾಗ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳ ಹಲವು ಸದಸ್ಯರಿಗೆ ಸುದೀರ್ಘ ಅವಧಿಯವರೆಗೆ ಚರ್ಚೆಗೆ ಅವಕಾಶ ನೀಡಿ, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಆದರೆ, ಪಟ್ಟು ಸಡಿಲಿಸದ ಕಾಂಗ್ರೆಸ್‌ ಸದಸ್ಯರು ಸಭಾಪತಿ ಪೀಠದ ಎದುರು ಅಹೋರಾತ್ರಿ ಧರಣಿ ನಡೆಸಿದರು.

ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಹೇಳಿಕೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಹಿಜಾಬ್‌ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದವರು ಹೈರಾಣಾಗಿದ್ದಾರೆ. ಅದರಿಂದ ಜನರ ಗಮನ ಬೇರೆಡೆ ಸೆಳೆಯಲು ಈಶ್ವರಪ್ಪ ಹೇಳಿಕೆಯನ್ನು ಬಳಸಿಕೊಳ್ಳುತ್ತಿದೆ. 125 ವರ್ಷಗಳ ಇತಿಹಾಸವಿರುವ ಪಕ್ಷದ ಸದಸ್ಯರು ಹೀಗೆಲ್ಲ ಮಾಡಬಾರದು’ ಎಂದರು.

ADVERTISEMENT

ವಿಪಕ್ಷ ಸದಸ್ಯರ ತಿರುಗೇಟು: ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ‘ರಾಷ್ಟ್ರದ್ರೋಹದ ಪ್ರಕರಣದಲ್ಲಿ ಗೃಹ ಸಚಿವರೇ ಆರೋಪಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ರಾಜ್ಯದ ದುರಂತ’ ಎಂದರು. ಕಾಂಗ್ರೆಸ್‌ನ ಸಲೀಂ ಅಹ್ಮದ್‌, ಯು.ಬಿ. ವೆಂಕಟೇಶ್‌, ನಜೀರ್‌ ಅಹ್ಮದ್‌ ಮತ್ತಿತರರು ದನಿಗೂಡಿಸಿದರು. ಗೃಹ ಸಚಿವರು ಹಿಜಾಬ್‌ ವಿಚಾರ ಪ್ರಸ್ತಾಪಿಸಿದ್ದನ್ನು ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ ಆಕ್ಷೇಪಿಸಿದರು.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನ ಹಲವು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಧರಣಿ ಕೊನೆಗೊಳಿಸಲು ಕ್ರಮ ಕೈಗೊಳ್ಳುವಂತೆ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸಲಹೆಗಳನ್ನು ನೀಡಿದರು. ಈಶ್ವರಪ್ಪ ರಾಜೀನಾಮೆ ಪಡೆದು ಸುಗಮ ಕಲಾಪಕ್ಕೆ ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದರು.

ಚರ್ಚೆಯ ಕೊನೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್‌, ‘ಆರ್‌ಎಸ್‌ಎಸ್‌ಗೆ ರಾಷ್ಟ್ರಧ್ವಜದ ಮೇಲೆ ಗೌರವ ಇಲ್ಲ. ಅದನ್ನೇ ಇವರೂ ಮುಂದುವರಿಸಿದ್ದಾರೆ. ಇವರೆಲ್ಲ ಢೋಂಗಿ ದೇಶಪ್ರೇಮಿಗಳು’ ಎಂದರು.

****

ಒಬ್ಬ ಸಚಿವರು ಮುಖ್ಯವೊ? ರಾಷ್ಟ್ರಧ್ವಜ ಮುಖ್ಯವೋ ಯೋಚಿಸಬೇಕು. ತಪ್ಪು ಮಾಡಿದ್ದರೆ ಸಚಿವರು ಕ್ಷಮೆ ಯಾಚಿಸಬೇಕು. ಸಂವಿಧಾನಕ್ಕೆ ವಿರುದ್ಧವಾದ ನಡವಳಿಕೆಯನ್ನು ಸಮರ್ಥಿಸಿಕೊಂಡರೆ ಯಾರಿಗೆ ಒಳಿತಾಗುತ್ತದೆ. ರಾಜೀನಾಮೆ ಕೊಟ್ಟರೆ ತಿಂಗಳೊಳಗೆ ಮಂತ್ರಿ ಆಗಲೂ ಸಾಧ್ಯ.

– ಮರಿತಿಬ್ಬೇಗೌಡ, ಜೆಡಿಎಸ್‌ ಸದಸ್ಯ

****

ಮಕ್ಕಳನ್ನು ಬೀದಿಗೆ ಬಿಟ್ಟು ಜಾತಿ, ಧರ್ಮ ತಂದು ಆಗಿದೆ. ಈಗ ರಾಜ್ಯದ ಜನತೆ ನಮ್ಮನ್ನು ನೋಡುತ್ತಿದ್ದಾರೆ. ಮುಖ್ಯಮಂತ್ರಿಯವರೇ ಮಧ್ಯ ಪ್ರವೇಶಿಸಿ ಇದಕ್ಕೆ ಕೊನೆ ಹಾಡಬೇಕು. ಪಕ್ಷದ ಕಾರಣ ಇಟ್ಟುಕೊಂಡು ಯಾರೂ ಪ್ರತಿಷ್ಠೆ ಪ್ರದರ್ಶಿಸುವುದು ಸರಿಯಲ್ಲ.

– ಎಚ್‌. ವಿಶ್ವನಾಥ್‌, ಬಿಜೆಪಿ ಸದಸ್ಯ

****

‌ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ಆಪಾದನೆ ಇದೆ. ಅವರಿಂದ ಸದನದಲ್ಲಿ ಹೇಳಿಕೆ ಕೊಡಿಸಬೇಕು. ಅದಕ್ಕೆ ಸಮಾಧಾನ ಆಗದಿದ್ದರೆ ವಿಧಾನಮಂಡಲದ ಎರಡೂ ಸದನಗಳ ಜಂಟಿ ಕಲಾಪ ಸಲಹಾ ಸಮಿತಿ ಸಭೆ ನಡೆಸಿ ಪ್ರಕರಣ ಇತ್ಯರ್ಥ ಮಾಡಬೇಕು.

– ಕೆ.ಟಿ. ಶ್ರೀಕಂಠೇಗೌಡ, ಜೆಡಿಎಸ್‌ ಸದಸ್ಯ

****

ಆರೋಪ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದವರಿದ್ದಾರೆ. ಈಗ ಈಶ್ವರಪ್ಪ ಸ್ವಯಂಪ್ರೇರಿತರಾಗಿ ರಾಜೀನಾಮೆ ಕೊಡಬೇಕು. ಇಲ್ಲವಾದರೆ ಮುಖ್ಯಮಂತ್ರಿಯವರು ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕು.

– ಆರ್‌.ಬಿ.ತಿಮ್ಮಾಪೂರ, ಕಾಂಗ್ರೆಸ್‌ ಸದಸ್ಯ

****

ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ, ಹಸಿರು ಮೂರು ಬಣ್ಣಗಳಿಗೂ ಸಮಾನ ಗೌರವವಿದೆ. ಕೇಸರಿ ಬಗ್ಗೆ ಮಾತನಾಡಿದರೆ ತಪ್ಪೇನಿದೆ? ಎಲ್ಲದಕ್ಕೂ ರಾಜೀನಾಮೆ ಕೊಡಿ ಎಂದರೆ ಹೇಗೆ?

– ತೇಜಸ್ವಿನಿಗೌಡ, ಬಿಜೆಪಿ ಸದಸ್ಯೆ

****

ಈಶ್ವರಪ್ಪ ಅವರ ಜತೆ 37 ವರ್ಷದಿಂದ ಕೆಲಸ ಮಾಡಿದ್ದೇನೆ. 1992ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಲು ಅವರೇ ಪ್ರೇರಣೆ. ಅವರು ರಾಷ್ಟ್ರಧ್ವಜದ ವಿಚಾರದಲ್ಲಿ ತಪ್ಪು ಮಾತನಾಡಲು ಸಾಧ್ಯವಿಲ್ಲ.

– ಭಾರತಿ ಶೆಟ್ಟಿ, ಬಿಜೆಪಿ ಸದಸ್ಯೆ

****

ಹರಿಪ್ರಸಾದ್‌– ಆಯನೂರು ವಾಕ್ಸಮರ

ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಬುಧವಾರ ಚರ್ಚೆಯ ನಡುವೆ ನಾಗಪುರವನ್ನು ‘ಹಾವಿನಪುರ’ ಎಂದು ಕರೆದಿದ್ದಕ್ಕೆ ಗುರುವಾರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಆಯನೂರು ಮಂಜುನಾಥ್‌, ‘ನಾವು ಕೊತ್ವಾಲ್‌ಪುರದ ಪ್ರಜೆಗಳು ಎಂದು ಕರೆದುಕೊಳ್ಳುತ್ತೇವೆ’ ಎಂದು ಕೆಣಕಿದರು.

ಇಬ್ಬರ ನಡುವೆ ತೀವ್ರ ವಾಕ್ಸಮರ ನಡೆಯಿತು. ‘ನಾಯಕರನ್ನು ಮೆಚ್ಚಿಸಲು ಮಾತನಾಡುತ್ತಿದ್ದೀರಿ. ಭಾಷೆ ಸರಿಪಡಿಸಿಕೊಳ್ಳಿ. ಇಲ್ಲವಾದರೆ ನಮಗೂ ಮಾತನಾಡಲು ಗೊತ್ತು’ ಎಂದು ಆಯನೂರು ಸವಾಲು ಹಾಕಿದರು.

‘ಕೊತ್ವಾಲ್‌ಪುರದವರನ್ನು ಶಿವಮೊಗ್ಗದಿಂದ ಬೆಳೆಸಿ ಬೆಂಗಳೂರಿಗೆ ಕಳುಹಿಸಿದ್ದು ಯಾರು ಹೇಳಿಬಿಡಿ. ಆ ಭಾಗದ ಸದಸ್ಯರೊಬ್ಬರು ನಮ್ಮ ಪಕ್ಷಕ್ಕೂ ಬಂದಿದ್ದರು. ನಮ್ಮ ಪಕ್ಷದಲ್ಲಿ ಟಿಕೆಟ್‌ ಪಡೆಯಲು ಏನು ಮಾಡಿದ್ದರು ಎಂದು ಹೇಳಿದರೆ ನನ್ನ ಬಾಯಿ ಹೊಲಸಾಗುತ್ತದೆ’ ಎಂದು ಆಯನೂರು ಹಿಂದೆ ಕಾಂಗ್ರೆಸ್‌ ಟಿಕೆಟ್‌ ಪಡೆದ ಸಂದರ್ಭವನ್ನು ಹರಿಪ್ರಸಾದ್‌ ಪರೋಕ್ಷವಾಗಿ ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.