ADVERTISEMENT

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ: ಸೋಮಣ್ಣ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:30 IST
Last Updated 23 ಮಾರ್ಚ್ 2022, 19:30 IST
ವಿ. ಸೋಮಣ್ಣ
ವಿ. ಸೋಮಣ್ಣ    

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ನ್ಯಾಯಾಲಯದಿಂದ ವಿಚಾರಣೆ ಎದುರಿಸುತ್ತಿರುವ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಸಂಪುಟದಿಂದ ಕೈಬಿಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ವಿಧಾನಸಭೆಯಲ್ಲಿ ಒತ್ತಾಯಿಸಿದರು.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಸೋಮಣ್ಣ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ರಾಮಕೃಷ್ಣ ಎಂಬುವವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಕುರಿತು ತನಿಖೆ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್‌ಪಿ ‘ಬಿ’ ವರದಿ ಸಲ್ಲಿಸಿದ್ದರು. ‘ಬಿ’ ವರದಿ ತಿರಸ್ಕರಿಸಿದ ನ್ಯಾಯಾಲಯ ವಿಚಾರಣೆ ಆರಂಭಿಸಲು ತೀರ್ಮಾನಿಸಿದ್ದು, ಏಪ್ರಿಲ್‌ 16ಕ್ಕೆ ಖುದ್ದು ಹಾಜರಾಗುವಂತೆ ಸೋಮಣ್ಣ ಅವರಿಗೆ ಆದೇಶಿಸಿದೆ. ಅವರನ್ನು ಹೇಗೆ ಸಂಪುಟದಲ್ಲಿ ಮುಂದುವರಿಸುತ್ತೀರಿ’ ಎಂದು ಪ್ರಶ್ನಿಸಿದರು.

ಸಚಿವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಿಚಾರಣೆ ನಡೆಸಲು ನ್ಯಾಯಾಲಯ ತೀರ್ಮಾನಿಸಿದೆ. ಅವರು ನಗರ ಪಾಲಿಕೆ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಯಾಗಿ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪ ಇದೆ. ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗುತ್ತಿದೆ. ಸೋಮಣ್ಣ ಅವರೇ ರಾಜೀನಾಮೆ ನೀಡಬೇಕು, ಇಲ್ಲವಾದರೆ ಮುಖ್ಯಮಂತ್ರಿಯವರು ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಕಾಂಗ್ರೆಸ್‌ನ ಹಲವು ಶಾಸಕರೂ ಸಿದ್ದರಾಮಯ್ಯ ಮಾತಿಗೆ ದನಿಗೂಡಿಸಿದರು. ಆಗ ಮಧ್ಯಪ್ರವೇಶ ಮಾಡಿದ ಜೆಡಿಎಸ್‌ನ ಎಚ್‌.ಡಿ. ರೇವಣ್ಣ, ‘ನೋಟಿಸ್‌ ಜಾರಿಯಾದ ಮಾತ್ರಕ್ಕೆ ರಾಜೀನಾಮೆ ಕೇಳುವುದು ಸರಿಯಲ್ಲ’ ಎಂದು ಸೋಮಣ್ಣ ಅವರ ಬೆಂಬಲಕ್ಕೆ ನಿಂತರು. ಸೋಮಣ್ಣ ಕೂಡ ಸಮಜಾಯಿಷಿ ನೀಡಲು ಮುಂದಾದರು.

‘ನೀವು ನ್ಯಾಯಾಲಯವನ್ನೇ ಅವಮಾನಿಸುತ್ತಿದ್ದೀರಿ. ಸಚಿವರ ವಿರುದ್ಧ ನ್ಯಾಯಾಲಯವೇ ವಿಚಾರಣೆ ಆರಂಭಿಸಿದೆ. ಆರೋಪಗಳಲ್ಲಿ ಹುರುಳಿದೆ ಎಂದು ಹೇಳಿದೆ. ರಾಜೀನಾಮೆ ಪಡೆಯಲು ಇನ್ನೇನು ಬೇಕು’ ಎಂದು ಸಿದ್ದರಾಮಯ್ಯ ಕೇಳಿದರು.

‘ಆರೋಪ ಬಂದಾಕ್ಷಣ ಅಪರಾಧಿಯಲ್ಲ’
‘ಸೋಮಣ್ಣ ವಿರುದ್ಧ ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಎಸಿಬಿ ಅಧಿಕಾರಿ ಸಲ್ಲಿಸಿದ್ದ ‘ಬಿ’ ವರದಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆರೋಪ ಬಂದ ಮಾತ್ರಕ್ಕೆ ಎಲ್ಲರೂ ಅಪರಾಧಿಗಳಲ್ಲ. ನ್ಯಾಯಾಲಯದ ಆದೇಶವನ್ನು ಮೇಲಿನ ಹಂತದಲ್ಲಿ ಪ್ರಶ್ನಿಸುವುದಕ್ಕೂ ಅವಕಾಶವಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.