ADVERTISEMENT

ಗ್ಯಾರಂಟಿ ಸಮೀಕ್ಷೆ: ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬಳಕೆ –ಎಚ್‌ಡಿಕೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ‘ಗ್ಯಾರಂಟಿಗಳ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನಿಯೋಜನೆ ಮಾಡಿರುವ ರಾಜ್ಯ ಸರ್ಕಾರದ ನಡೆ ಲಜ್ಜೆಗೇಡಿತನದ ಪರಮಾವಧಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಈ ಕುರಿತು ‘ಎಕ್ಸ್‌’ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತವರಿಗೆ ಸರ್ಕಾರ ಕೋಟ್ಯಂತರ ಹಣ ನೀಡಿದೆ. ಆದರೆ, ಬೀದಿ ಬೀದಿ ತಿರುಗಿ ಸಮೀಕ್ಷೆ ಮಾಡುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಬಿಡಿಗಾಸು ನೀಡುತ್ತಿದೆ. ಪಲ್ಸ್‌ ಪೋಲಿಯೊ ಲಸಿಕೆ ಅಭಿಯಾನಕ್ಕೆ ನಿಯೋಜಿತರಾಗಿರುವ ಅವರಿಂದ ಗ್ಯಾರಂಟಿ ಸಮೀಕ್ಷೆ ನಡೆಸುತ್ತಿದೆ. ಹಾಗಾದರೆ, ಗ್ಯಾರಂಟಿ ಸಮೀಕ್ಷೆ ಹೆಸರಿನಲ್ಲಿ ತಮಗೆ ಬೇಕಾದ ಸಂಸ್ಥೆಗಳಿಗೆ ಕೊಟ್ಟಿರುವ ಕೋಟ್ಯಂತರ ರೂಪಾಯಿ ತೆರಿಗೆ ಹಣ ಎಲ್ಲಿಗೆ ಹೋಯಿತು’ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರಿಗೆ ಸಂಪುಟದರ್ಜೆ ಕೊಟ್ಟು ರಚಿಸಲಾಗಿರುವ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಏನು ಮಾಡುತ್ತಿದೆ. ಜಿಲ್ಲೆ, ತಾಲೂಕು, ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ಸಮೀಕ್ಷೆ ಮಾಡುತ್ತಿಲ್ಲವೇ? ಗ್ಯಾರಂಟಿ ಅನುಷ್ಠಾನ ನಿರ್ವಹಣೆಗೆ ವಾರ್ಷಿಕ ₹16 ಕೋಟಿ ವೆಚ್ಚ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಬೆಳಗ್ಗೆ 9 ರಿಂದ ಸಂಜೆ 4ರವರೆಗೂ ಉರಿಬಿಸಿಲಿನಲ್ಲಿ ಮಾಡುವ ಈ ಕೆಲಸಕ್ಕೆ ಸಿಗುವ ಗೌರವಧನ ಕೇವಲ ₹1 ಸಾವಿರ. ಜನರ ತೆರಿಗೆ ಹಣದಿಂದಲೇ ಗ್ಯಾರಂಟಿ ಸಮಾವೇಶಗಳನ್ನು ನಡೆಸುತ್ತಿದ್ದು, ನಿಗೂಢ  ಕಂಪನಿಗಳಿಗೆ ಸಮೀಕ್ಷೆ ಹೆಸರಿನಲ್ಲಿಯೇ ಜನರ ತೆರಿಗೆ ಹಣ ಸುರಿಯುತ್ತಿದೆ ಎಂದು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.