ADVERTISEMENT

ಬಾಯ್ತೆರೆದರೆ ಮಂತ್ರಿಗಿರಿಗೆ ಕುತ್ತು: ‘ಕೈ’ ನಾಯಕರಿಗೆ ವೇಣುಗೋಪಾಲ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 23:31 IST
Last Updated 1 ನವೆಂಬರ್ 2023, 23:31 IST
ಕಾಂಗ್ರೆಸ್ ಪಕ್ಷದ ಬಾವುಟ
ಕಾಂಗ್ರೆಸ್ ಪಕ್ಷದ ಬಾವುಟ   

ಬೆಂಗಳೂರು: ಕಾಂಗ್ರೆಸ್‌ ಮತ್ತು ಸರ್ಕಾರದೊಳಗೆ ನಡೆಯುತ್ತಿರುವ ಆಂತರಿಕ ತುಮುಲ, ಬಹಿರಂಗ ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದನ್ನು ಗಮನಿಸಿದ ‘ಕೈ’ ಹೈಕಮಾಂಡ್‌, ಸಚಿವರು, ಶಾಸಕರಿಗೆ ಕಠಿಣ ಎಚ್ಚರಿಕೆ ರವಾನಿಸಿದೆ.

ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಜನಪರ ಯೋಜನೆಗಳಿಗೆ ಪ್ರಚಾರ ಸಿಗುವ ಬದಲು, ಕಳೆದ ಒಂದು ವಾರದಿಂದ ಪಕ್ಷದೊಳಗಿನ ವಿವಾದಗಳೇ ಹೆಚ್ಚು ಸದ್ದು ಮಾಡುತ್ತಿರುವುದರಿಂದ ಆತಂಕಗೊಂಡ ಹೈಕಮಾಂಡ್ ದಿಢೀರ್ ಮಧ್ಯಪ್ರವೇಶ ಮಾಡಿದೆ. 

ತೆಲಂಗಾಣ ಪ್ರವಾಸದಲ್ಲಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ರಾಜ್ಯ ಘಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ತಡರಾತ್ರಿ ಬೆಂಗಳೂರಿಗೆ ದೌಡಾಯಿಸಿದರು. ಬುಧವಾರ ಬೆಳಿಗ್ಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು  ಹೋಟೆಲ್‌ಗೆ ಕರೆಯಿಸಿಕೊಂಡ ಇವರಿಬ್ಬರೂ ಕೆಲ ತಾಸು ರಹಸ್ಯ ಸಮಾಲೋಚನೆ ನಡೆಸಿದರು. ಬಳಿಕ, ಅವರಿಬ್ಬರೊಂದಿಗೆ ಕೆಪಿಸಿಸಿ ಕಚೇರಿಗೆ ಬಂದು ಅಲ್ಲಿಯೂ ಸಭೆ ನಡೆಸಿದರು. 

ADVERTISEMENT

‘ಮುಖ್ಯಮಂತ್ರಿ ಬದಲಾವಣೆ, ಎರಡು ವರ್ಷಗಳ ಬದಲು ಸಚಿವ ಸಂಪುಟ ಪುನಾರಚನೆ, ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಇಂತಹ ವಿಷಯಗಳ ಬಗ್ಗೆ ಯಾರೊಬ್ಬರೂ ಮಾತನಾಡದಂತೆ ನೀವಿಬ್ಬರೇ ನಿಗಾವಹಿಸಬೇಕು. ನೀವು ನಿಯಂತ್ರಿಸದೇ ಇದ್ದರೆ ಹೈಕಮಾಂಡ್ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಲಿದೆ. ಸಚಿವ ಸ್ಥಾನದಿಂದ ಕೈಬಿಡುವುದೂ ಸೇರಿದಂತೆ ಎಲ್ಲ ರೀತಿಯ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಲಾಗುವುದೆಂಬ ಎಚ್ಚರಿಕೆ ನೀಡಬೇಕು’ ಎಂದು ಸಭೆಯ ವೇಳೆ ವೇಣುಗೋಪಾಲ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆ ಮಾಡಿದರು’ ಎಂದು ಮೂಲಗಳು ಹೇಳಿವೆ.

ಬಳಿಕ, ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲಾ, ಬಹಿರಂಗವಾಗಿ ಮಾತನಾಡುವವರಿಗೆ ಶಿಸ್ತಿನ ಕ್ರಮದ ಎಚ್ಚರಿಕೆಯನ್ನೂ ನೀಡಿದರು.

ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ, ಮೂರು ಅಥವಾ ಐದು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬೇಡಿಕೆಗಳು ಒಂದೂವರೆ ತಿಂಗಳ ಹಿಂದೆ ಮುನ್ನೆಲೆಗೆ ಬಂದಿದ್ದವು. ಕಾಂಗ್ರೆಸ್‌ ಒಳಮನೆಯಲ್ಲಿ ಬೇಗುದಿ ಹೆಚ್ಚುತ್ತಿರುವುದನ್ನು ಬಹಿರಂಗಗೊಳಿಸಿತ್ತು. ಆಗ ಮಧ್ಯ ಪ್ರವೇಶಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ‘ಯಾರೊಬ್ಬರೂ ಬಹಿರಂಗವಾಗಿ ಮಾತನಾಡಬಾರದು. ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಬೇಕು’ ಎಂದು ದೆಹಲಿಯಲ್ಲಿ ಕುಳಿತೇ ‘ಕಠಿಣ ಆಜ್ಞೆ’ ಹೊರಡಿಸಿದ್ದರು. ಕೆಲ ದಿನ ಮೌನಕ್ಕೆ ಶರಣಗಾಗಿದ್ದ ಸಚಿವರು, ಶಾಸಕರು ಅದೇ ಮಾದರಿಯ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದರು. 

ಇದರ ಜತೆಗೆ, ಬೆಳಗಾವಿ ರಾಜಕಾರಣ ಮತ್ತು ಆಡಳಿತದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅಸಮಾಧಾನಗೊಂಡಿದ್ದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬಂಡೆದ್ದಿದ್ದರು. ಇದು ಪಕ್ಷದೊಳಗೆ ಕಿಡಿ ಎಬ್ಬಿಸಿತ್ತು. ಈ ಬೆನ್ನಲ್ಲೇ, ಮಾತನಾಡಿದ್ದ ಶಾಸಕರು, ‘ಇನ್ನು ಎರಡು ವರ್ಷದ ಬಳಿಕ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ’ ಎಂದು ಹೇಳಿಕೆ ನೀಡಿದ್ದರು. ಅದೇ ದಿನ ರಾತ್ರಿ, ಗೃಹ ಸಚಿವ ಜಿ. ಪರಮೇಶ್ವರ ಅವರ ಮನೆಯಲ್ಲಿ ನಡೆದ  ಭೋಜನಕೂಟದಲ್ಲಿ ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಎಚ್‌.ಸಿ. ಮಹದೇವಪ್ಪ ಪಾಲ್ಗೊಂಡಿದ್ದರು. ಈ ‘ರಹಸ್ಯ ಭೋಜನ ಕೂಟ’ವು ಪಕ್ಷ–ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ನಿರೂಪಿಸುವಂತಿತ್ತು.

ಈ ಬೆಳವಣಿಗೆಗಳ ಮಧ್ಯೆಯೇ, ವೇಣುಗೋಪಾಲ್, ಸುರ್ಜೇವಾಲಾ ಅವರು ನಾಯಕರಿಬ್ಬರ ಜತೆ ನಡೆಸಿದ ಸಭೆ ಹೆಚ್ಚು ಮಹತ್ವ ಪಡೆದಿದೆ. 

‘ನಾಯಕರು ಹೀಗೆ ಬಹಿರಂಗ ಹೇಳಿಕೆ ನೀಡುತ್ತಾ ಹೋದರೆ ವರ್ಚಸ್ಸಿಗೆ ಧಕ್ಕೆ ತರುತ್ತದೆ. 30 ತಿಂಗಳಲ್ಲಿ ಅಧಿಕಾರ ಹಸ್ತಾಂತರ, ಸಚಿವ ಸಂಪುಟ ಪುನಾರಚನೆ ಈ ಎಲ್ಲ ವಿಷಯಗಳಲ್ಲಿ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಸಚಿವರು, ಶಾಸಕರು ಬಹಿರಂಗವಾಗಿ ಮಾತನಾಡದಂತೆ ಸೂಚಿಸಿ. ಎಲ್ಲರೂ ಒಗ್ಗೂಡಿ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ರಿಂದ 25 ಸ್ಥಾನ ಗೆಲ್ಲಿಸಿಕೊಂಡು ಬರುವುದು ಮೊದಲ ಆದ್ಯತೆ. ಈ ಬಗ್ಗೆ ಗಮನ ನೀಡಬೇಕು ಎಂದು ಶಾಸಕರಿಗೆ, ನಾಯಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಮತ್ತು ಶಿವಕುಮಾರ್‌ಗೆ ವೇಣುಗೋಪಾಲ್ ಹೇಳಿದರು’ ಎಂದು ಗೊತ್ತಾಗಿದೆ.

‘ಸರ್ಕಾರ ಜಾರಿ ಮಾಡಿದ ಗ್ಯಾರಂಟಿಗಳು ಜನರಿಗೆ ತಲುಪುತ್ತಿವೆ. ಗ್ಯಾರಂಟಿಗಳ ಜಾರಿಗಾಗಿ ಸರ್ಕಾರ ಎಷ್ಟೆಲ್ಲ ಯತ್ನ ಹಾಕಿದೆ ಎಂದು ಜನರಿಗೆ ಅರ್ಥ ಮಾಡಿಸಿಕೊಡಬೇಕು. ಇದರ ಫಲ ಲೋಕಸಭೆ ಚುನಾವಣೆಯಲ್ಲಿ ಸಿಗಬೇಕು. ನಾಯಕರು ಹಾದಿಬೀದಿಯಲ್ಲಿ ಮಾತನಾಡುತ್ತಿರುವುದರಿಂದ ಗ್ಯಾರಂಟಿಗಳಿಗಿಂತ ವಿವಾದಗಳೇ ಹೆಚ್ಚು ಸದ್ದು ಮಾಡುತ್ತಿವೆ. ನಾಲ್ಕು ಗ್ಯಾರಂಟಿಗಳ ಬಗ್ಗೆ ಜಾಗೃತಿ ಮೂಡಿಸಲು ಇಬ್ಬರೂ ಸೇರಿ ವಿಶೇಷ ಕಾರ್ಯಕ್ರಮ ರೂಪಿಸಿ ಎಂದು ಸಲಹೆ ನೀಡಿದರು’ ಎಂದು ತಿಳಿದುಬಂದಿದೆ.

‘ಬಿಜೆಪಿ-ಜೆಡಿಎಸ್‌ ರಾಜ್ಯದಲ್ಲಿ ದುರ್ಬಲವಾಗಿವೆ ಎಂದು ಕೆಲ ನಾಯಕರು ಭಾವಿಸಿದಂತಿದೆ. ಅದರ ಲಾಭ ಪಕ್ಷಕ್ಕೆ ಆಗಬೇಕು. ಕೆಲವರು ಅನಗತ್ಯವಾಗಿ ಮಾತನಾಡುತ್ತಿರುವುದರಿಂದ ನಮ್ಮ ದೌರ್ಬಲ್ಯಗಳು ಎದುರಾಳಿಗೆ ಅಸ್ತ್ರವಾಗುತ್ತವೆ. ಈ ಬಗ್ಗೆ ಜಾಗೃತರಾಗಿರುವಂತೆ ಎಲ್ಲರಿಗೂ ಸೂಚಿಸಬೇಕಿದೆ’ ಎಂದು ಹೇಳಿದ್ದಾಗಿ ಗೊತ್ತಾಗಿದೆ. 

ಲೋಕಸಭೆ ಚುನಾವಣೆ ಚರ್ಚೆ

ಲೋಕಸಭಾ ಚುನಾವಣೆಯ ಸಿದ್ಧತೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಮಾಹಿತಿ ಪಡೆದು ಪ್ರತಿ ಕ್ಷೇತ್ರದಿಂದ ಮೂವರ ಹೆಸರನ್ನು ಶಿಫಾರಸು ಮಾಡುವಂತೆ ಉಸ್ತುವಾರಿಗಳಿಗೆ ಸೂಚಿಸಲಾಗಿತ್ತು. ಈ ಪಟ್ಟಿಯ ಬಗ್ಗೆಯೂ ವೇಣುಗೋಪಾಲ್ ಅವರು ಶಿವಕುಮಾರ್, ಸಿದ್ದರಾಮಯ್ಯ ಜತೆ ಸಮಾಲೋಚನೆ ನಡೆಸಿದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.