ADVERTISEMENT

ಎಂ.ಬಿ. ಪಾಟೀಲ್ ಹೇಳಿಕೆಯಿಂದ ಸಂಚಲನ: ಅನಗತ್ಯ ಹೇಳಿಕೆ ನೀಡದಂತೆ ಹೈಕಮಾಂಡ್‌ ಸೂಚನೆ?

​ಪ್ರಜಾವಾಣಿ ವಾರ್ತೆ
Published 23 ಮೇ 2023, 9:00 IST
Last Updated 23 ಮೇ 2023, 9:00 IST
   

ಬೆಂಗಳೂರು: ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿರಲಿದ್ದಾರೆ’ ಎಂದು ಸಚಿವ ಎಂ.ಬಿ. ಪಾಟೀಲ ನೀಡಿದ ಹೇಳಿಕೆ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಆ ಬೆನ್ನಲ್ಲೆ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಯಾರೂ ಚರ್ಚಿಸದಂತೆ ಖಡಕ್‌ ಎಚ್ಚರಿಕೆ ನೀಡಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಯಾರೂ ಕೂಡ ಅನಗತ್ಯ ಹೇಳಿಕೆಗಳನ್ನು ನೀಡಬಾರದು. ಒಳ್ಳೆಯ ಆಡಳಿತ ನೀಡುವುದಷ್ಟೇ ಈಗ ನಮ್ಮ ಆದ್ಯತೆ. ಇದರ ಕಡೆ ಗಮನ ಕೊಡಬೇಕಿದೆ. ಇದರ ಹೊರತಾಗಿ ಯಾವುದೇ ಅನಗತ್ಯ ಗೊಂದಲದ ಹೇಳಿಕೆ ನೀಡಬಾರದು’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣದ ಶಾಸಕರು, ಸಚಿವರಿಗೆ ಸೂಚನೆ ನೀಡಿದ್ದಾರೆ.

ADVERTISEMENT

‘ಗೊಂದಲ ಮೂಡಿಸುವ ಹೇಳಿಕೆಗಳೂ ಸೇರಿದಂತೆ ಎಲ್ಲವನ್ನೂ ಎಐಸಿಸಿ ಗಮನಿಸುತ್ತದೆ. ಯಾವುದೇ ತೀರ್ಮಾನಗಳಿದ್ದರೂ ಎಐಸಿಸಿ ನಾಯಕರೇ ತೀರ್ಮಾನಿಸುತ್ತಾರೆ’ ಎಂದೂ ಸುರ್ಜೇವಾಲಾ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದೂ ಗೊತ್ತಾಗಿದೆ.

ಡಿ.ಕೆ. ಸುರೇಶ್‌ ಕಿಡಿ: ‘ನಾನು ಎಂ.ಬಿ. ಪಾಟೀಲ ಅವರಿಗೆ ತೀಕ್ಷ್ಣವಾದ ಎಚ್ಚರಿಕೆ ಕೊಡಬಲ್ಲೆ. ಆದರೆ, ಈಗ ಅದು ಬೇಡ. ಅವರ ಹೇಳಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಸುರ್ಜೇವಾಲಾ ಅವರನ್ನೇ ಕೇಳಿ’ ಎಂದು ಡಿ.ಕೆ. ಶಿವಕುಮಾರ್‌ ಸಹೋದರ, ಸಂಸದ ಡಿ .ಕೆ. ಸುರೇಶ್‌ ಹೇಳಿದರು.

‘ಎಂ.ಬಿ. ಪಾಟೀಲ ಅವರ ಹೇಳಿಕೆಯನ್ನು ನಾನು ನೋಡಿಲ್ಲ. ಆದರೆ, ಅಧಿಕಾರ ಹಂಚಿಕೆ ಕುರಿತು ಏನೇ ಮಾತುಕತೆ ಆಗಿದ್ದರೂ ಅದು ಎಐಸಿಸಿ ಅಧ್ಯಕ್ಷರು, ಉಸ್ತುವಾರಿ ಮತ್ತು ಇಬ್ಬರು ನಾಯಕರ ನಡುವೆ ಮಾತ್ರ ಆಗಿದೆ. ಏನೇ ಇದ್ದರೂ ಈ ನಾಲ್ವರಿಗೆ ಮಾತ್ರ ಗೊತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಹೇಳಿದರು.

‘ಸರ್ಕಾರ ಚೆನ್ನಾಗಿ ನಡೆಸಬೇಕು. ಜನರ ನಿರೀಕ್ಷೆ ಈಡೇರಿಸಬೇಕು. ವರಿಷ್ಠರ ತೀರ್ಮಾನದಂತೆ ಎಲ್ಲವೂ ನಡೆಯುತ್ತದೆ’ ಎಂದೂ ಅವರು ಹೇಳಿದರು..

ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ‘ನಾನು ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಮಾತನಾಡುವಷ್ಟು ಸ್ಟ್ರಾಂಗ್ ಅಲ್ಲ. ಅಷ್ಟು ಎತ್ತರಕ್ಕೆ ನಾನು ಬೆಳೆದಿಲ್ಲ. ಅವೆಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ಆ ವಿಚಾರ ನನ್ನ ನಿಲುವಿಗೆ ಸಿಗದಿರುವ ವಿಚಾರ‘ ಎಂದರು.

‘ನಮ್ಮ ಜಿಲ್ಲೆಯಲ್ಲಿ (ಹಾಸನ) ಕಾಂಗ್ರೆಸ್ ಗೆದ್ದಿರುವುದು ಒಂದು ಕ್ಷೇತ್ರದಲ್ಲಿ ಮಾತ್ರ. ಹೀಗಾಗಿ ಲೋಕಸಭೆ, ಜಿಲ್ಲಾ ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ನನಗೆ ಸಚಿವ ಸ್ಥಾನ ನೀಡುತ್ತಾರೆಂಬ ನಂಬಿಕೆ ಇದೆ. ಎಲ್ಲವೂ ಹೈಕಮಾಂಡ್ ಹಾಗೂ ಸಿಎಂ, ಡಿಸಿಎಂ ಗಮನದಲ್ಲಿದೆ’ ಎಂದರು.

ಇವುಗಳನ್ನೂ ಓದಿ..

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ: ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿರುವೆ– ಎಂ.ಬಿ.ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.