‘ಅನ್ನ ಸುವಿಧಾ ಯೋಜನೆ’ ವಿಸ್ತರಿಸಿದ ಫಲಕ ಬಿಡುಗಡೆ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಮೀರ್ ಅಹ್ಮದ್ ಖಾನ್, ಕೆ.ಎಚ್.ಮುನಿಯಪ್ಪ ಪಾಲ್ಗೊಂಡಿದ್ದರು
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಗೊತ್ತಿದ್ದೂ ಗೊತ್ತಿದ್ದೂ ಆಹಾರ ವ್ಯರ್ಥ ಮಾಡುವುದು, ಅನ್ನಕ್ಕೆ ತೋರಿಸುವ ಅಹಂಕಾರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಆಹಾರ ಇಲಾಖೆ ಗುರುವಾರ ಆಯೋಜಿಸಿದ್ದ ‘ವಿಶ್ವ ಆಹಾರ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರತಿವರ್ಷ ಬೆಂಗಳೂರು ಒಂದರಲ್ಲೇ 943 ಟನ್ ಆಹಾರ ವ್ಯರ್ಥವಾಗುತ್ತಿದೆ. ಅಂದಾಜು ₹360 ಕೋಟಿ ಮೌಲ್ಯದ ಆಹಾರವನ್ನು ನಾವು ವ್ಯರ್ಥ ಮಾಡುತ್ತಿದ್ದೇವೆ’ ಎಂದು ಜಿಕೆವಿಕೆ ಅಧ್ಯಯನ ಹೇಳಿದೆ ಎಂದರು.
‘ಅನ್ನಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳಸಂತೆ ಮಾರಾಟ ತಪ್ಪಿಸಲು 5 ಕಿಲೋ ಅಕ್ಕಿ ಕೊಟ್ಟು, ಉಳಿದ ಐದು ಕಿಲೋ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ’ ಎಂದರು.
‘ನಾವು ಒಂದು ಕಾಲದಲ್ಲಿ ಆಹಾರ ಧಾನ್ಯಕ್ಕಾಗಿ ಅಮೆರಿಕದ ಮೇಲೆ ಅವಲಂಬಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ. ಇದರ ಜೊತೆಗೆ ಊಟ ವ್ಯರ್ಥ ಮಾಡುವ ಪ್ರಮಾಣವೂ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ’ ಎಂದರು.
‘ಹಸಿವಿನಿಂದ ಯಾರೂ ಮಲಗಬಾರದು ಎನ್ನುವುದು ಕಾಂಗ್ರೆಸ್ ಬದ್ಧತೆ. ಹೀಗಾಗಿ, ಬಡವರ ಪರವಾದ ಆಹಾರ ಭದ್ರತಾ ಕಾಯ್ದೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು’ ಎಂದರು.
‘ಅನ್ನ ಸುವಿಧಾ’ ಜಾರಿ: ‘2024-25ನೇ ಸಾಲಿನ ಬಜೆಟ್ ಘೋಷಣೆಯಂತೆ 75 ವರ್ಷ ದಾಟಿದ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ಮನೆಯ ಬಾಗಿಲಿಗೆ ತಲುಪಿಸುವ ‘ಅನ್ನ ಸುವಿಧಾ ಯೋಜನೆ’ಯನ್ನು ಜಾರಿಗೊಳಿಸಲಾಗಿದೆ’ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಬಸನಗೌಡ ಬಾದರ್ಲಿ, ಶ್ರೀನಿವಾಸ್, ಆರ್ಯ ವೈಶ್ಯ ನಿಗಮದ ಅಧ್ಯಕ್ಷ ರಾಮಪ್ರಸಾದ್, ಆಹಾರ ಇಲಾಖೆಯ ಆಯುಕ್ತರಾದ ವಾಸಿ ರೆಡ್ಡಿ ಜೋತ್ಸ್ನಾ, ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಇದ್ದರು.
‘ಪ್ರತಿ ಹನಿ ನೀರಿಗೆ ಕೊಡುವ ಪ್ರಾಮುಖ್ಯವನ್ನು ಪ್ರತಿ ಅಗುಳು ಅನ್ನಕ್ಕೂ ನೀಡಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ಹಸಿದವನಿಗೆ ಮಾತ್ರ ಆಹಾರದ ಬೆಲೆ ಗೊತ್ತಿದೆ. ಎಲ್ಲರೂ ಕಷ್ಟಪಡುವುದೂ ಒಂದು ತುತ್ತು ಅನ್ನಕ್ಕಾಗಿ ಒಂದು ಗೇಣು ಬಟ್ಟೆಗಾಗಿ. ಇದರ ಹೊರತಾಗಿ ನಾವು ಏನೇ ಮಾಡಿದರೂ ಅವು ತಾತ್ಕಾಲಿಕ ಮಾತ್ರ’ ಎಂದರು. ‘ಪ್ರಧಾನಿ ಮತ್ತು ಇತರೆ ನಾಯಕರು ನಮ್ಮ ಸರ್ಕಾರದ ಯೋಜನೆಗಳನ್ನು ಟೀಕೆ ಮಾಡಿದರೂ ಕೊನೆಗೆ ತಮ್ಮ ರಾಜಕೀಯ ಸ್ಥಾನಮಾನ ಉಳಿಸಿಕೊಳ್ಳಲು ಈ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ. ನಮ್ಮ ಯೋಜನೆಗಳು ಇಡೀ ದೇಶಕ್ಕೆ ಮಾದರಿ’ ಎಂದೂ ಹೇಳಿದರು.
ಬಡವರ ವಿರೋಧಿ ಸಿದ್ಧಾಂತ ಹೊಂದಿರುವ ಬಿಜೆಪಿ ಆಹಾರ ಭದ್ರತಾ ಕಾಯ್ದೆಯನ್ನು ವಿರೋಧಿಸಿತ್ತು. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಅನ್ನದ ಪರವಾಗಿ ಇರುವ ಕಾಂಗ್ರೆಸ್ ಬದ್ಧತೆಯನ್ನು ಅರ್ಥ ಮಾಡಿಕೊಳ್ಳಬೇಕು-ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.