ADVERTISEMENT

ಮುಸ್ಲಿಮರ ಹಾದಿ ತಪ್ಪಿಸುವ ಕಾಂಗ್ರೆಸ್‌: ಛಲವಾದಿ ನಾರಾಯಣ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 20:36 IST
Last Updated 5 ಸೆಪ್ಟೆಂಬರ್ 2024, 20:36 IST
ಛಲವಾದಿ ನಾರಾಯಣ ಸ್ವಾಮಿ
ಛಲವಾದಿ ನಾರಾಯಣ ಸ್ವಾಮಿ   

ಬೆಂಗಳೂರು: ‘ಎಲ್ಲಿ ವಿದ್ಯೆ ಕಡಿಮೆ ಇರುತ್ತದೆಯೋ ಅಲ್ಲಿ ಅರಿವೂ ಕಡಿಮೆ ಇರುತ್ತದೆ. ಮುಸಲ್ಮಾನ ಬಂಧುಗಳನ್ನು ಕಾಂಗ್ರೆಸ್‌ ಹಾದಿತಪ್ಪಿಸುತ್ತಿದೆ. ಕಾಂಗ್ರೆಸ್‌ ಬಿತ್ತುವ ವಿಷಕ್ಕೆ ಮುಸಲ್ಮಾನರು ಬಲಿಯಾಗುತ್ತಿದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಅಲ್ಪಸಂಖ್ಯಾತರ ಮೋರ್ಚಾದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಓಡಿಸಲಾಗುತ್ತದೆ, ಅವರನ್ನು ಬದುಕಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ವಿಷ ಬಿತ್ತುತ್ತಿದೆ’ ಎಂದು ಆರೋಪಿಸಿದರು.

‘ತಾನು ಮುಸಲ್ಮಾನರ ಪರ ಎಂದು ಕಾಂಗ್ರೆಸ್‌ ಹೇಳಿಕೊಳ್ಳುತ್ತದೆ. ಹಾಗಿದ್ದಲ್ಲಿ, ಮುಸ್ಲಿಮರನ್ನು ಏಕೆ ಮುಖ್ಯಮಂತ್ರಿ ಮಾಡಿಲ್ಲ, ಪಕ್ಷದ ಅಧ್ಯಕ್ಷ ಸ್ಥಾನವನ್ನು ಮುಸ್ಲಿಮರಿಗೇಕೆ ನೀಡಿಲ್ಲ. ಎಲ್ಲೆಡೆ ಮುಸ್ಲಿಮರನ್ನು ಜೋಕರ್‌ಗಳಂತೆ ಮುಂದೆ ತಂದು ಕೂರಿಸುತ್ತದೆ ಅಷ್ಟೆ’ ಎಂದರು.

ADVERTISEMENT

‘ಕೋವಿಡ್‌ ಸಮಯದಲ್ಲಿ ರಾಜ್ಯದ ಜನರ ರಕ್ಷಣೆಗೆ ಶ್ರಮಹಾಕಿ ದುಡಿದವರನ್ನು ಅಭಿನಂದಿಸುವ ಬದಲಿಗೆ, ರಾಜ್ಯ ಸರ್ಕಾರವು ಅಂತಹವರ ಮೇಲೆ ಅವ್ಯವಹಾರದ ಆರೋಪ ಹೊರಿಸುತ್ತಿದೆ. ಬಿಜೆಪಿ ನಾಯಕರನ್ನು ಸಿಲುಕಿಸಲು ಮುಯ್ಯಿಗೆ ಮುಯ್ಯಿ ಎಂಬಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ಉಡುಪಿಯ ಶಿಕ್ಷಕನೊಬ್ಬನಿಗೆ ಪ್ರಶಸ್ತಿ ಘೋಷಿಸಿ, ಆತ ಹಿಜಾಬ್‌ ನಿರ್ಬಂಧಿಸಿದರು ಎಂದು ಪ್ರಶಸ್ತಿ ವಾಪಸ್‌ ಪಡೆದ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಸರ್ಕಾರವೇ ಆ ಶಿಕ್ಷಕನನ್ನು ಉತ್ತಮ ಎಂದು ಗುರುತಿಸಿತ್ತು. ಎಸ್‌ಡಿಪಿಐ ದೂರು ನೀಡಿದ ತಕ್ಷಣ ಪ್ರಶಸ್ತಿ ಪಟ್ಟಿಯಿಂದ ಹೊರಗಿಟ್ಟಿದೆ. ಇದು ಸರ್ಕಾರದ ದ್ವಂದ್ವ ನೀತಿಯಲ್ಲವೇ? ಕಾಂಗ್ರೆಸ್‌, ಎಸ್‌ಡಿಪಿಐ ಅನ್ನು ಕೇಳಿಕೊಂಡು ಸರ್ಕಾರ ನಡೆಸುತ್ತಿದೆಯೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.