ADVERTISEMENT

ಬಿಎಸ್‌ವೈ ಜೈಲುವಾಸಕ್ಕೆ ಕಾಂಗ್ರೆಸ್‌ ಕಾರಣ: ಸಚಿವ ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 12:42 IST
Last Updated 1 ಮಾರ್ಚ್ 2023, 12:42 IST
   

ಬೆಂಗಳೂರು:ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನಿರ್ನಾಮವಾಗಲಿದೆ ಎಂದು ಬಿಜೆಪಿಯ ವಿಜಯಸಂಕಲ್ಪ ರಥಯಾತ್ರೆಯ ನಾಲ್ಕನೇ ತಂಡದ ನೇತೃತ್ವವಹಿಸಿರುವ ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಮುಕ್ತ ಕರ್ನಾಟಕ’ ಮಾಡಲು ವಿಜಯ ಸಂಕಲ್ಪ ರಥ ಯಾತ್ರೆ ನಿರ್ಣಾಯಕ ಯಾತ್ರೆಯಾಗಲಿದೆ ಎಂದು ತಿಳಿಸಿದರು.

‘ನಮ್ಮ ಅಶ್ವಮೇಧದ ಕುದುರೆಗಳನ್ನು ಬಿಟ್ಟಿದ್ದೇವೆ. ಕಟ್ಟಿ ಹಾಕುವ ಧೈರ್ಯ ಸಿದ್ದರಾಮಯ್ಯ ಸೇರಿದಂತೆ ಯಾರಿಗೂ ಇಲ್ಲ. ಅಂತಿಮವಾಗಿ ಜಯ ನಮ್ಮದೇ. ಒಂದೇ ಸಲಕ್ಕೆ ಪಕ್ಷದ ಹವಾ ಏಳಲಿದೆ. ಈವರೆಗೆ ಮಾಡಿರುವ ಎಲ್ಲ ಸಮೀಕ್ಷೆಗಳಲ್ಲೂ ನಮ್ಮ ಪಕ್ಷವೇ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿವೆ. ಹೀಗಾಗಿ ಮತ್ತೆ ನಾವೇ ಅಧಿಕಾರದ ಗದ್ದುಗೆ ಏರಲಿದ್ದೇವೆ’ ಎಂದರು.

ADVERTISEMENT

ಇಂದಿನಿಂದ ನಾಲ್ಕು ವಿಜಯ ಸಂಕಲ್ಪ ಯಾತ್ರೆಗಳು ಆರಂಭವಾಗಲಿವೆ. ನಾಲ್ಕನೇ ಯಾತ್ರೆ ಇದೇ 3 ರಂದು ಆವಟಿಯ ಚೆನ್ನಕೇಶವ ದೇವಾಲಯದ ಆವರಣದಿಂದ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚಾಲನೆ ನೀಡಲಿದ್ದಾರೆ. ಆ ಬಳಿಕ ದೇವನಹಳ್ಳಿ ಶಾಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದ್ದು, 30 ರಿಂದ 40 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಅಶೋಕ ತಿಳಿಸಿದರು.

‘ನನ್ನ ನೇತೃತ್ವದ ತಂಡದಲ್ಲಿ ಸಚಿವರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಕೆ. ಗೋಪಾಲಯ್ಯ,ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್‌, ಲೋಕಸಭಾ ಸದಸ್ಯ ಪಿ.ಸಿ.ಮೋಹನ್‌ ಸೇರಿ ಹಲವು ಶಾಸಕರು, ವಿಧಾನಪರಿಷತ್‌ ಸದಸ್ಯರ ಇರಲಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಯಾತ್ರೆ ನಡೆಯಲಿದೆ. ಒಟ್ಟು 17 ಸಾರ್ವಜನಿಕ ಸಭೆಗಳು, 7 ಮೋರ್ಚಾಗಳ ಸಭೆಯೂ ನಡೆಯಲಿದೆ. ಎಲ್ಲ ಕಡೆ ರೋಡ್ ಷೋ, ಸಾರ್ವಜನಿಕ ಸಭೆ ಇರುತ್ತದೆ’ ಎಂದು ಅವರು ವಿವರಿಸಿದರು.

‘ಬಿಎಸ್‌ವೈ ಜೈಲುವಾಸಕ್ಕೆ ಕಾಂಗ್ರೆಸ್‌ ಕಾರಣ’

ಬಿ.ಎಸ್‌.ಯಡಿಯೂರಪ್ಪ ಅವರನ್ನು ಜೈಲಿಗೆ ಹಾಕಿಸಿದ್ದು ಕಾಂಗ್ರೆಸ್‌ ಪಕ್ಷ. ಈಗ ಪ್ರೀತಿಯ ಮಳೆ ಸುರಿಸುತ್ತಿದೆ ಎಂದು ಸಚಿವ ಆರ್‌.ಅಶೋಕ ಹೇಳಿದರು.

ಕಾಂಗ್ರೆಸ್‌ ಪಕ್ಷ ಯಡಿಯೂರಪ್ಪ ವಿರುದ್ಧ ಕೇಸು ದಾಖಲಿಸಿತು. ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಮತ್ತು ಅಂದಿನ ರಾಜ್ಯಪಾಲರು ಮಸಲತ್ತು ನಡೆಸಿ ಜೈಲಿಗೆ ಹೋಗುವಂತೆ ಮಾಡಿದರು. ಇದರಲ್ಲಿ ಸೋನಿಯಗಾಂಧಿ ಪಾತ್ರವೂ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎನ್‌ಡಿಎ ಸರ್ಕಾರ ಸಿಬಿಐ ದುರ್ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್‌ ದೂರುತ್ತಿದೆ. ಆಗ ಯುಪಿಎ ಸರ್ಕಾರ ದುರ್ಬಳಕೆ ಮಾಡಿಕೊಂಡಿಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.