ADVERTISEMENT

ಮಣಿದ ಸಿ.ಎಂ: ಮೂವರಿಗೆ ಅಧ್ಯಕ್ಷ ‘ಭಾಗ್ಯ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:34 IST
Last Updated 9 ಜನವರಿ 2019, 19:34 IST
ಸಿಎಂ ಕುಮಾರಸ್ವಾಮಿ
ಸಿಎಂ ಕುಮಾರಸ್ವಾಮಿ   

ಬೆಂಗಳೂರು: ಕಾಂಗ್ರೆಸ್‌ ನಾಯಕರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇಮಕಕ್ಕೆ ಬಾಕಿ ಇದ್ದ ಐದು ನಿಗಮ ಮಂಡಳಿಗಳ ಪೈಕಿ ಮೂರು ನಿಗಮ ಮಂಡಳಿಗಳಿಗೆ ಬುಧವಾರ ಅಧ್ಯಕ್ಷರನ್ನು ನೇಮಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಎಸ್‌.ಟಿ. ಸೋಮಶೇಖರ್‌, ರೇಷ್ಮೆ ಕೈಗಾರಿಕಾ ನಿಗಮಕ್ಕೆ ಕೆ.ಎನ್‌. ಸುಬ್ಬಾರೆಡ್ಡಿ, ಬಿಎಂಟಿಸಿ ಅಧ್ಯಕ್ಷ ಸ್ಥಾನಕ್ಕೆ ಎನ್‌.ಎ. ಹ್ಯಾರಿಸ್‌ ಅವರನ್ನು ನೇಮಿಲಾಗಿದೆ.

ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಲಿಡ್ಕರ್‌) ಅಧ್ಯಕ್ಷರಾಗಿ ಪ್ರಸಾದ್‌ ಅಬ್ಬಯ್ಯ ಅವರನ್ನು ನೇಮಿಸಲಾಗಿದೆ. ಎಲ್ಲರಿಗೂ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ.

ADVERTISEMENT

ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ವಿ. ಮುನಿಯಪ್ಪ, ಯೋಜನಾ ಆಯೋಗದ ಅಧ್ಯಕ್ಷ ಹುದ್ದೆಗೆ ಶರಣಬಸಪ್ಪ ದರ್ಶನಾಪುರ ಮತ್ತು ದೆಹಲಿ ವಿಶೇಷ ಪ್ರತಿನಿಧಿ ಹುದ್ದೆಗೆ ಅಜಯ್ ಸಿಂಗ್‌, ಸಂಸದೀಯ ಕಾರ್ಯದರ್ಶಿ ಹುದ್ದೆಗೆ ಎಂ.ಎ.ಗೋಪಾಲಸ್ವಾಮಿ ಹೆಸರನ್ನು ಕಾಂಗ್ರೆಸ್‌ ಸೂಚಿಸಿತ್ತು.

ಈ ಹೆಸರುಗಳಿಗೆ ಇನ್ನೂ ಮುಖ್ಯಮಂತ್ರಿ ಅಂಕಿತ ಹಾಕಿಲ್ಲ.

ಹ್ಯಾರಿಸ್ ಅವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ಮಾಡಲು ಸಾರಿಗೆ ಖಾತೆ ಹೊಂದಿರುವ ಜೆಡಿಎಸ್ ಅಡ್ಡಗಾಲು ಹಾಕಿತ್ತು. ಎಸ್.ಟಿ.ಸೋಮಶೇಖರ್ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ಮಾಡಲು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅಡ್ಡಗಾಲು ಹಾಕಿದ್ದರು ಎಂಬ ಆರೋಪ ವ್ಯಕ್ತವಾಗಿತ್ತು.

ಸುಬ್ಬಾ ರೆಡ್ಡಿ ಹೆಸರು ರೇಷ್ಮೆ ಕೈಗಾರಿಕೆ ನಿಗಮಕ್ಕೆ ಶಿಫಾರಸು ಮಾಡಿದ್ದರೂ ಅಂಗೀಕಾರ ಸಿಕ್ಕಿರಲಿಲ್ಲ.

ತಾಂತ್ರಿಕ ಕಾರಣಕ್ಕಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾದ ಡಾ. ಕೆ. ಸುಧಾಕರ್ ಅವರನ್ನು ಮತ್ತು ಸಚಿವ ಎಚ್.ಡಿ. ರೇವಣ್ಣ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಅಧೀನಕ್ಕೆ ಬರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ನಿಯೋಜಿತರಾಗಿರುವ ಟಿ. ವೆಂಕಟರಮಣಯ್ಯ ಅವರ ನೇಮಕಕ್ಕೆ ಅಂತಿಮ ಮುದ್ರೆ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.