ADVERTISEMENT

ಚುನಾವಣೆ ಫಲಿತಾಂಶದ ಬಳಿಕ ಮೈತ್ರಿಯ ಒಳಬೇಗುದಿ ಸ್ಫೋಟ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 9 ಮೇ 2019, 8:37 IST
Last Updated 9 ಮೇ 2019, 8:37 IST
ಕೆ.ಎಸ್. ಈಶ್ವರಪ್ಪ (ಸಂಗ್ರಹ ಚಿತ್ರ)
ಕೆ.ಎಸ್. ಈಶ್ವರಪ್ಪ (ಸಂಗ್ರಹ ಚಿತ್ರ)   

ಹುಬ್ಬಳ್ಳಿ: ‘ಜೆಡಿಎಸ್–ಕಾಂಗ್ರೆಸ್ ಮೈತ್ರಿಯೊಳಗೆ ಕೊತ ಕೊತ ಕುದಿಯುತ್ತಿರುವ ಒಳ ಬೇಗುದಿ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಸ್ಫೋಟಗೊಳ್ಳಲಿದೆ. ಇದು ಬಿಜೆಪಿಗೆ ಅನುಕೂಲವಾಗಿ, ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಕುಂದಗೋಳ ತಾಲ್ಲೂಕಿನ ರಟ್ಟಿಹಳ್ಳಿಯಲ್ಲಿ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಪ್ರಚಾರ ನಡೆಸಿದ ಅವರು, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ ಕತೆ ಆ ದೇವರಿಗೆ ಪ್ರೀತಿ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

‘ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ ಎನ್ನುವ ಶಾಸಕರೆಲ್ಲಾ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಮಾತು ಕೇಳುತ್ತಿಲ್ಲ. ಸಿದ್ದರಾಮಯ್ಯನವರೇ ತಮ್ಮ ಬೆಂಬಲಿಗ ಶಾಸಕರಿಗೆ ಕುಮ್ಮಕ್ಕು ಕೊಟ್ಟು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನು ಯಾರೂ ಸಹ ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುತ್ತಿಲ್ಲ. ಮತ್ತೊಮ್ಮೆ ಮುಖ್ಯಮಂತ್ರಿ ‌ಆಗಬೇಕೆಂದು ಸಿದ್ದರಾಮಯ್ಯ ಕನಸು ಕಾಣುತ್ತಾ ಇದ್ದಾರೆ, ಅದು ನನಸಾಗಲ್ಲ’ ಎಂದು ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯನವರು ದೇವಸ್ಥಾನಗಳನ್ನೂ ತಮ್ಮ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮೈಲಾರದಲ್ಲಿ ನಿನ್ನೆ ಸಿದ್ದರಾಮಯ್ಯ ಮುಂದಿನ ‌ಮುಖ್ಯಂತ್ರಿ ಎಂದು ಘೋಷಣೆ ಕೂಗುವಂತೆ ಮಾಡಿದ್ದಾರೆ. ದೇವಸ್ಥಾನದಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಶಾಸಕ ಬಸವರಾಜ ಬೊಮ್ಮಾಯಿ ಮತ್ತು ಕುಂದಗೋಳ ಬಿಜೆಪಿ ಘಟಕದ ಅಧ್ಯಕ್ಷ ಮಹಾಂತೇಶ ಶ್ಯಾಗೋಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.