ADVERTISEMENT

ದೆಹಲಿಯಲ್ಲೂ ರಾಜ್ಯ ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 16:14 IST
Last Updated 14 ಡಿಸೆಂಬರ್ 2025, 16:14 IST
ಭೋಜನಕೂಟದಲ್ಲಿ ರಾಹುಲ್‌ ಗಾಂಧಿ ಜತೆಗೆ ಡಿ.ಕೆ. ಶಿವಕುಮಾರ್‌ 
ಭೋಜನಕೂಟದಲ್ಲಿ ರಾಹುಲ್‌ ಗಾಂಧಿ ಜತೆಗೆ ಡಿ.ಕೆ. ಶಿವಕುಮಾರ್‌    

ನವದೆಹಲಿ: ಮತ ಕಳವು ವಿರುದ್ಧ ರ‍್ಯಾಲಿಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಗೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣದವರು ಇಲ್ಲಿ ಶಕ್ತಿ ಪ್ರದರ್ಶನ ನಡೆಸಿದರು. 

ಕರ್ನಾಟಕ ಭವನದಲ್ಲಿ ಸೇರಿದ್ದ ಶಿವಕುಮಾರ್ ಬೆಂಬಲಿಗರು, ‘ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದರು. ‘ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ’ ಎಂದು ಮುಖ್ಯಮಂತ್ರಿ ಬೆಂಬಲಿಗರು ಘೋಷಣೆಗಳನ್ನು ಮೊಳಗಿಸಿದರು. 

ಕಾಂಗ್ರೆಸ್‌ ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ  ಪರಸ್ಪರರಿಗೆ ಏರ್ಪಡಿಸಿದ್ದ ಉಪಾಹಾರ ಕೂಟದ ಬಳಿಕ ಬಣ ರಾಜಕೀಯ ತಣ್ಣಗಾಗಿತ್ತು. ಬೆಳಗಾವಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ್ದ ವಿಧಾನ ಪರಿಷತ್‌ ಸದಸ್ಯ ಯತೀಂದ್ರ, ‘ಶಿವಕುಮಾರ್‌ ಬೇಡಿಕೆಯನ್ನು ಹೈಕಮಾಂಡ್ ಒಪ್ಪಿಲ್ಲ. ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ’ ಎಂದು ಹೇಳಿದ್ದರು. ಅದಾದ ಬಳಿಕ ಮತ್ತೆ ರಾಜಕೀಯ ಚಟುವಟಿಕೆ ಬಿರುಸು ಪಡೆದಿತ್ತು. ಅಧಿವೇಶನದ ಸಂದರ್ಭದಲ್ಲಿ ಎರಡೂ ಬಣದವರು ಔತಣ ಕೂಟಗಳನ್ನು ನಡೆಸಿದ್ದರು. ಬಣ ಬಡಿದಾಟ ತೀವ್ರಗೊಂಡಿತ್ತು. 

ADVERTISEMENT

ಮತ ಕಳವು ವಿರುದ್ಧದ ರ‍್ಯಾಲಿಯಲ್ಲಿ ಭಾಗಿಯಾಗಲು ಬಂದಿದ್ದ ಸಚಿವರಾದ ಆರ್‌.ಬಿ. ತಿಮ್ಮಾಪುರ, ಮಾಂಕಾಳ ವೈದ್ಯ, ಮಾಜಿ ಸಚಿವ ತನ್ವಿರ್ ಸೇಠ್, ಶಾಸಕರಾದ ಅಲ್ಲಮಪ್ರಭು ಪಾಟೀಲ, ಆನೇಕಲ್ ಶಿವಣ್ಣ, ಎ.ಸಿ ಶ್ರೀನಿವಾಸ್, ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹ್ಮದ್, ವಿಧಾನ ಪರಿಷತ್‌ ಸದಸ್ಯರಾದ ಪುಟ್ಟಣ್ಣ, ಮಂಜುನಾಥ್ ಭಂಡಾರಿ, ವಸಂತಕುಮಾರ್, ಬಸನಗೌಡ ಬಾದರ್ಲಿ, ಶ್ರೀನಿವಾಸ್, ಪರಿಷತ್‌ನ ಮಾಜಿ ಸದಸ್ಯ ಯು.ಬಿ. ವೆಂಕಟೇಶ್ ಮತ್ತಿತರರು ಶಿವಕುಮಾರ್ ಅವರನ್ನು ಕರ್ನಾಟಕ ಭವನದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಬಳಿಕ ಶಿವಕುಮಾರ್‌ ಜತೆಗೆ ಉಪಾಹಾರ ಸೇವಿಸಿದರು.

ರಾಹುಲ್ ಭೇಟಿಯಾದ ಡಿಕೆಶಿ 

ರಾಹುಲ್ ಗಾಂಧಿ ಅವರನ್ನು ಡಿ.ಕೆ.ಶಿವಕುಮಾರ್ ಭಾನುವಾರ ಭೇಟಿ ಮಾಡಿ ಚರ್ಚಿಸಿದರು.  ಪಕ್ಷದ ಪ್ರಮುಖ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿರಾ ಭವನದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಉಪಮುಖ್ಯಮಂತ್ರಿ ಭಾಗಿಯಾದರು. ಈ ವೇಳೆ ರಾಹುಲ್ ಅವರನ್ನು ಭೇಟಿ ಮಾಡಿ ಸುಮಾರು ಎರಡು ನಿಮಿಷ ಸಮಾಲೋಚಿಸಿದರು. ‘ರಾಜ್ಯದ ಗೊಂದಲವನ್ನು ಶೀಘ್ರ ಬಗೆಹರಿಸುತ್ತೇವೆ‘ ಎಂದು ರಾಹುಲ್ ಭರವಸೆ ನೀಡಿದರು ಎಂದು ಶಿವಕುಮಾರ್‌ ಆಪ್ತ ಮೂಲಗಳು ತಿಳಿಸಿವೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಅವರಲ್ಲಿ ಪ್ರಶ್ನಿಸಿದಾಗ ‘ಅದನ್ನೆಲ್ಲ ನಿಮಗೆ ಹೇಳಲು ಆಗುವುದಿಲ್ಲ’ ಎಂದರು. ಆ ಬಳಿಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು.  ಕಳೆದ ತಿಂಗಳು ಎರಡು ಬಾರಿ ರಾಷ್ಟ್ರ ರಾಜಧಾನಿಗೆ ಬಂದಿದ್ದ ಶಿವಕುಮಾರ್ ಅವರು ರಾಹುಲ್‌ ಭೇಟಿಗೆ ಪ್ರಯತ್ನಿಸಿದ್ದರು. ಆದರೆ ರಾಹುಲ್‌ ಕಾಲಾವಕಾಶ ಕೊಟ್ಟಿರಲಿಲ್ಲ. 

ಸಿಎಂ–ಡಿಸಿಎಂಗೆ ಸಿಗದ ಭಾಷಣ ಅವಕಾಶ 

ಮತ ಕಳವು ವಿರುದ್ಧ ಆಯೋಜಿಸಿದ್ದ ರ‍್ಯಾಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಭಾಷಣ ಮಾಡಲು ಅವಕಾಶ ಸಿಗಲಿಲ್ಲ.  ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್‌ವಿಂದರ್ ಸಿಂಗ್ ಸುಖು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಛತ್ತೀಸಗಢದ ಮಾಜಿ ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಮತ್ತಿತರರು ರ‍್ಯಾಲಿಯಲ್ಲಿ ಭಾಷಣ ಮಾಡಿದರು. 

ಭೋಜನಕೂಟಕ್ಕೆ ಸಿಎಂ ಗೈರು

ಖರ್ಗೆ ಆಯೋಜಿಸಿದ್ದ ಔತಣಕೂಟದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿಲ್ಲ. ಅವರು ಮಧ್ಯಾಹ್ನ 12.30ಕ್ಕೆ ದೆಹಲಿಗೆ ಬರಬೇಕಿತ್ತು. ವಿಮಾನ ವಿಳಂಬವಾಗಿದ್ದರಿಂದ ಅವರು ಬರುವಾಗ 1.30 ಆಗಿತ್ತು. ಕರ್ನಾಟಕ ಭವನಕ್ಕೆ ಅವರು 2 ಗಂಟೆಗೆ ತಲುಪಿದರು. ಅಲ್ಲಿ ಭೋಜನ ಸ್ವೀಕರಿಸಿ ರಾಮ್‌ಲೀಲಾ ಮೈದಾನಕ್ಕೆ ತೆರಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.