ADVERTISEMENT

ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ– ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 21:51 IST
Last Updated 5 ಜನವರಿ 2021, 21:51 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಪಕ್ಷದ ಪಾಲಿಗೆ 2021 ಹೋರಾಟದ ವರ್ಷ, ಪಕ್ಷ ಸಂಘಟನೆಯ ವರ್ಷವೆಂದು ಘೋಷಿಸಿದ್ದೇನೆ. ಎಲ್ಲ ಬ್ಲಾಕ್ ಅಧ್ಯಕ್ಷರು, ಅವರ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬುಧವಾರದಿಂದ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಕಾರ್ಯಕರ್ತರ ಧ್ವನಿ ನಾಯಕರ ಧ್ವನಿಯಾಗಬೇಕು. ಈ ಉದ್ದೇಶದಿಂದ ಎಲ್ಲ ವಿಭಾಗದ ಜಿಲ್ಲೆಗಳ ಪಕ್ಷ ನಾಯಕರು, ಬ್ಲಾಕ್ ಅಧ್ಯಕ್ಷರ ಸಭೆ ಆಯೋಜಿಸಿದ್ದೇನೆ. ಇದು ಪಕ್ಷದ ಆಂತರಿಕ ಸಭೆ’ ಎಂದರು.

ಚುನಾವಣೆ ಗೆಲ್ಲಲು ತಂತ್ರ: ‘ಅನುಭವ ಮಂಟಪ ಶಂಕುಸ್ಥಾಪನೆ ಚುನಾವಣೆ ತಂತ್ರ. ಬಸವ ಕಲ್ಯಾಣ ಉಪಚುನಾವಣೆ ಗೆಲ್ಲಲು ಈ ರೀತಿ ಮಾಡಿದ್ದಾರೆ. ಈ ಯೋಜನೆಯ ತೀರ್ಮಾನ ಮಾಡಿದ್ದು ನಮ್ಮ ಪಕ್ಷ. ಅವರು (ಬಿಜೆಪಿಯವರು) ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ. ಅವರಿಗಿರುವ ಹಕ್ಕನ್ನು ಪ್ರಶ್ನಿಸುವುದಿಲ್ಲ’ ಎಂದು ಶಿವಕುಮಾರ್‌ ಹೇಳಿದರು.

ADVERTISEMENT

‘ನಾನು ಯಾವ ಪಕ್ಷದ ನಾಯಕರನ್ನೂ ಸೆಳೆಯುವ ಪ್ರಶ್ನೆಯೇ ಇಲ್ಲ. ಪಕ್ಷ ಬದಲಿಸುವುದು ಅವರವರ ಆಯ್ಕೆ. ನಮ್ಮ ನಾಯಕತ್ವ, ಪಕ್ಷದ ಸಿದ್ಧಾಂತಗಳ ಬಗ್ಗೆ ಯಾರಿಗೆ ನಂಬಿಕೆ ಇದೆಯೊ ಅವರು ಕಾಂಗ್ರೆಸ್ ಸೇರಬಹುದು. ನಾನು ಯಾರನ್ನೂ ಎ ಟೀಮ್, ಬಿ ಟೀಮ್ ಎಂದು ಕರೆಯುವುದಿಲ್ಲ’ ಎಂದರು.

ಯಾರೂ ಪಕ್ಷ ಬಿಡಲ್ಲ: ‘ಸಿ.ಎಂ. ಇಬ್ರಾಹಿಂ ಅವರು ಪಕ್ಷದ ಹಿರಿಯ ನಾಯಕರು. ಅವರಿಗೆ ಅಸಮಾಧಾನ ಇರಬಹುದು. ಅದನ್ನು ಪಕ್ಷ ಸರಿಪಡಿಸಲಿದೆ’ ಎಂದರು.

ನಿರ್ಲಕ್ಷ್ಯ ಸರಿಯಲ್ಲ: ‘ಕೊರೊನಾ ಲಸಿಕೆ ವಿಚಾರದಲ್ಲಿ ಸರ್ಕಾರ ವೈಜ್ಞಾನಿಕ ಕ್ರಮ ಅನುಸರಿಸಬೇಕು. ವಿವಿಧ ರಾಜ್ಯಗಳಲ್ಲಿ ಚುನಾವಣೆ ಎದುರಾಗುತ್ತಿರುವುರಿಂದ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಆತುರದ ನಿರ್ಧಾರಕ್ಕೆ ಬರುತ್ತಿದೆ. ಇದು ಅಪಾಯಕಾರಿ. ಜನರ ಜೀವದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು’ ಎಂದೂ ಶಿವಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.