ADVERTISEMENT

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ: ಸಚಿವರೊಬ್ಬರ ಸಂಬಂಧಿ ಕೈವಾಡ– ಡಿಕೆಶಿ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮೇ 2022, 11:29 IST
Last Updated 2 ಮೇ 2022, 11:29 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ಮುಖ್ಯಮಂತ್ರಿಗೆ ಬದ್ಧತೆ ಇದ್ದರೆ ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾಗಿರುವವರು ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದು ಬಿಜೆಪಿ ಶಾಸಕರು, ನಾಯಕರು, ಮಂತ್ರಿಯಾಗಲಿ, ಕಾಂಗ್ರೆಸ್, ಜೆಡಿಎಸ್‌ನವರಾಗಿರಲಿ, ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ನನಗೆ ಬಂದಿರುವ ಮಾಹಿತಿ ಪ್ರಕಾರ ಈ ಅಕ್ರಮದಲ್ಲಿ ಸಚಿವರೊಬ್ಬರ ಸಂಬಂಧಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಿದೆ. ಇದು ಸತ್ಯವಿರಬಹುದು, ಇಲ್ಲದಿರಬಹುದು. ನನಗೆ ಅನೇಕರು ಫೋನ್ ಕರೆ ಮಾಡಿ ಅವರು ಮುಂದೆ ಮುಖ್ಯಮಂತ್ರಿ ಆಗುವವರು. ಅವರ ಹೆಸರು ಎಳೆದು ತರಬೇಡಿ, ಮುಚ್ಚಿಹಾಕಿ ಎಂದು ಹೇಳುತ್ತಿದ್ದಾರೆ. ಬೇಕಾದರೆ ನನ್ನ ಫೋನ್ ಕರೆ ವಿವರ ಪರಿಶೀಲಿಸಿ. ಮಂಡ್ಯದ ನಾಯಕರೊಬ್ಬರು ನನಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದಾರೆ’ ಎಂದರು.

‘ನನಗೆ ಸಾಕಷ್ಟು ಕರೆಗಳು ಬರುತ್ತಿದ್ದು, ಆಯ್ಕೆಯಾಗಿದ್ದ ಅಭ್ಯರ್ಥಿ ತಂದೆ ಈ ರೀತಿ ಆಯಿತಲ್ಲ ಎಂದು ಹಾಸಿಗೆ ಹಿಡಿದಿದ್ದಾರೆ. ಮತ್ತೊಬ್ಬರನ್ನು ಪ್ರಭಾವಿ ವ್ಯಕ್ತಿಗಳ ಪ್ರಭಾವ ಬಳಸಿ ಪೊಲೀಸರ ತನಿಖೆಯಿಂದ ಬಿಡಿಸಲಾಗಿದೆ. ಆ ಪ್ರಭಾವ ಬೀರಿದವರು ಯಾರು ಎಂದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಸಿಐಡಿಯವರು ಎಷ್ಟು ಪ್ರಾಮಾಣಿಕವಾಗಿ ಈ ಪ್ರಕರಣದ ತನಿಖೆ ಮಾಡುತ್ತಾರೆ ಎಂಬುದು ಬಹಳ ಮುಖ್ಯ’ ಎಂದರು.

ADVERTISEMENT

‘ಸರ್ಕಾರ ತನಿಖೆ ಮಾಡಿ, ಈ ಹಗರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪ್ರಕಟಿಸುವ ಮುನ್ನವೇ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿದ್ದಾರೆ. ಈ ನಿರ್ಧಾರದ ಮೂಲಕ ಸರ್ಕಾರ ಕಾನೂನು ವ್ಯಾಜ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಜತೆಗೆ ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರವಿದೆ’ ಎಂದು ದೂರಿದರು.

‘ಪೊಲೀಸ್ ಇಲಾಖೆಗೆ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕರೇ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದಿದ್ದಾರೆ. ಪೊಲೀಸ್ ಮಹಾನಿರ್ದೇಶಕರು, ಗೃಹ ಸಚಿವರ ಹೇಳಿಕೆಗಳು ಭಿನ್ನವಾಗಿರುವುದು ಉತ್ತಮ ಆಡಳಿತವೇ‘ ಎಂದು ಪ್ರಶ್ನಿಸಿದ ಅವರು, ‘ಯಾರೋ ಕರೆ ಮಾಡಿದರು ಎಂದು ವಿಚಾರಣೆ ಮಾಡದೇ ಆರೋಪಿಗಳನ್ನು ಬಿಟ್ಟು ಕಳುಹಿಸುತ್ತಿದ್ದಾರೆ. ಮಾಧ್ಯಮಗಳು ಈ ಮಾಹಿತಿ ಪ್ರಕಟಿಸುತ್ತಿದ್ದು, ಮಾಧ್ಯಮಗಳಿಗೂ ಅವರು ನೊಟೀಸ್ ಕೊಟ್ಟು ವಿಚಾರಣೆ ಮಾಡಲಿ ನೋಡೋಣ‘ ಎಂದರು.

‘ಸಿಐಡಿ ಅಧಿಕಾರಿಗಳು ಬಂಧಿತ ಅಭ್ಯರ್ಥಿಗಳ ಊರಿಗೆ ಹೋಗಿ ಅಲ್ಲಿ ತನಿಖೆ ಮಾಡಿಲ್ಲ. ಅವರು ಅಷ್ಟು ಹಣ ಹೇಗೆ ಕೊಟ್ಟಿದ್ದಾರೆ ಎಂಬ ತನಿಖೆಯನ್ನೂ ಮಾಡಿಲ್ಲ. ಈಗ ಆ ಅಭ್ಯರ್ಥಿ, ಅವರಿಂದ ಹಣ ಪಡೆದವರ ವಿಚಾರಣೆ ಮಾಡದಂತೆ ಒತ್ತಡ ಹಾಕಿದವರು ಯಾರು ಎಂಬ ವಿಚಾರವಾಗಿ ಮುಖ್ಯಮಂತ್ರಿ ಮಾಹಿತಿ ಪಡೆಯಬೇಕು. ಈ ಪ್ರಕರಣದಲ್ಲಿ ಸರ್ಕಾರ ಏನು ಮಾಡುತ್ತದೆ ಎಂದು ಕಾದು ನೋಡುತ್ತೇವೆ’ ಎಂದರು.

‘ಮುಖ್ಯಮಂತ್ರಿ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟರೆ ನೀವು ಆ ಸಚಿವರ ಹೆಸರು ಹೇಳುತ್ತೀರಾ’ ಎಂಬ ಪ್ರಶ್ನೆಗೆ, ‘ಇಲ್ಲಿ ಮುಚ್ಚುಮರೆ ಇಲ್ಲ. ಭ್ರಷ್ಟಾಚಾರ, ಸುಳ್ಳು, ಕೆಮ್ಮು ಹಾಗೂ ಇತರೆ ವಿಚಾರವನ್ನು ಬಚ್ಚಿಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಲಂಚ ನೀಡುವಾಗ ಆಸ್ತಿ ಮಾರಬೇಕು, ಇಲ್ಲವೇ ಸಾಲ ಮಾಡಬೇಕು. ಇದೆಲ್ಲವೂ ಆಚೆಗೆ ಬರುತ್ತದೆಯಲ್ಲವೇ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.