ADVERTISEMENT

‘ನನ್ನನ್ನು ಬಂಧಿಸುವಲ್ಲಿ ಯಶಸ್ವಿಯಾದ ಬಿಜೆಪಿ ಸ್ನೇಹಿತರಿಗೆ ಅಭಿನಂದನೆ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 20:38 IST
Last Updated 3 ಸೆಪ್ಟೆಂಬರ್ 2019, 20:38 IST
   

ಬೆಂಗಳೂರು: ನನ್ನನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾದ ಬಿಜೆಪಿಯ ನನ್ನ ಸ್ನೇಹಿತರಿಗೆ ಧನ್ಯವಾದಗಳು ಎಂದು ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಡಿ.ಕೆ ಶಿವಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ದೆಹಲಿಯ ತಮ್ಮ ಫ್ಲ್ಯಾಟ್‌ನಲ್ಲಿ ಪತ್ತೆಯಾದ ₹8.50 ಕೋಟಿಹಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳಿಂದ ಜಾರಿ ನಿರ್ದೇಶನಾಲಯದಲ್ಲಿ ವಿಚಾರಣೆಗೆ ಒಳಗಾಗಿದ್ದ ಡಿ.ಕೆ ಶಿವಕುಮಾರ್‌ಮಂಗಳವಾರ ರಾತ್ರಿ ಬಂಧನಕ್ಕೀಡಾದರು. ಇದಾದ ಕೆಲವೇ ಕ್ಷಣಗಳಲ್ಲಿ ಅವರ ಟ್ವಿಟರ್‌ ಖಾತೆಯಿಂದ ಸಂದೇಶಗಳು ಹೊರಬಿದ್ದವು.

ಏನು ಹೇಳಿದ್ದಾರೆ ಡಿಕೆಶಿ...

ADVERTISEMENT

‘ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದಲ್ಲಿನ ನನ್ನ ವಿರುದ್ಧದ ಪ್ರಕರಣಗಳು ರಾಜಕೀಯ ಪ್ರೇರಿತವಾದವು. ಬಿಜೆಪಿ ದ್ವೇಷದ, ಪ್ರತಿಕಾರದ ರಾಜಕಾರಣಕ್ಕೆ ನಾನು ಬಲಿಪಶುವಾಗಿದ್ದೇನೆ. ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಇದರಿಂದ ನಿರಾಶರಾಗಬೇಕಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ,’ ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘ದೇವರು ಮತ್ತು ದೇಶದ ನ್ಯಾಯಾಂಗದ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ. ಅದರ ಮೂಲಕ, ಈ ದ್ವೇಷದರಾಜಕಾರಣವನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುತ್ತೇನೆ,’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಗುಜರಾತ್‌ನ ಶಾಸಕರನ್ನು ರಕ್ಷಣೆ ಮಾಡಿದ್ದರ ಫಲವಾಗಿ ನನ್ನ ಮೇಲೆ ರಾಜಕೀಯ ಪ್ರೇರಿತವಾಗಿ ಆದಾಯ ತೆರಿಗೆ ದಾಳಿ ನಡೆಯಿತು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ನಾನು ಪಕ್ಷ ಸೂಚಿಸಿದ್ದನ್ನು ಮಾಡಿದ್ದೇನೆ. ಅದಕ್ಕಾಗಿಯೇ ನಾನು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದೇನೆ,’ ಎಂದೂ ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.