ADVERTISEMENT

ಜೆಡಿಎಸ್ ಜತೆ ಮತ್ತೆ ದೋಸ್ತಿಯ ಸುಳಿವು ಕೊಟ್ಟ ಕಾಂಗ್ರೆಸ್‌ ನಾಯಕ ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 14:02 IST
Last Updated 30 ನವೆಂಬರ್ 2019, 14:02 IST
   

ಹುಬ್ಬಳ್ಳಿ: ಉಪ ಚುನಾವಣೆ ಫಲಿತಾಂಶದ ಬಳಿಕರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೀಳಲಿದ್ದುಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಒಪ್ಪಿದರೆ, ಮತ್ತೊಮ್ಮೆ ಮೈತ್ರಿ ಸರ್ಕಾರ ರಚಿಸಬಹುದು ಎಂದು ಕಾಂಗ್ರೆಸ್‌ನ ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲ್ಲುವುದು ಖಚಿತ. ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ನಂತರ ದೇವೇಗೌಡರಿಗೂ, ಮರು ಮೈತ್ರಿ ಬಗ್ಗೆ ಮನವರಿಕೆಯಾಗಿದೆ. ಇಲ್ಲದಿದ್ದರೆ, ಮುಂದೇನಾಗಲಿದೆ ಎಂದು ಕಾದು ನೋಡಬೇಕಿದೆ ಎಂದರು.

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿದ್ದ ಬಗ್ಗೆ, ಉಭಯ ಪಕ್ಷಗಳ ನಾಯಕರ ಪರಸ್ಪರ ದೋಷಾರೋಪ ತಣ್ಣಗಾಗಿದೆ. ನಮ್ಮ ನಡುವೆ ಅಂತಹ ದೊಡ್ಡ ಭಿನ್ನಾಭಿಪ್ರಾಯವಿಲ್ಲ‌. ಹಾಗಾಗಿ, ಸರ್ಕಾರ ರಚನೆಗೆ ಯಾವುದೇ ಅಡ್ಡಿ ಇಲ್ಲ ಎಂದರು.

ADVERTISEMENT

ಆರಂಭದಿಂದಲೂ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಬಿಜೆಪಿ ಹೇಳುತ್ತಿತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯೇ ನಿಧಾನವಾಗಿ ಆ ಹಂತ ತಲುಪುತ್ತಿದೆ. ಬಿಜೆಪಿ ಬಿಂಬಿಸಿದಂತೆ ಕೆಟ್ಟ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ, ರಾಜಕೀಯ ಅಸ್ತಿತ್ವಕ್ಕಾಗಿ ಬಿಜೆಪಿಗೆ ಹೋಗಲು ಮುಂದಾಗಿದ್ದವರಿಗೆ ಹಾಗೂ ಇತರ ಪಕ್ಷದವರಿಗೂ ಮನವರಿಕೆಯಾಗಿದೆ. ಹಾಗಾಗಿ, ಪಕ್ಷ ಸೇರಲು ಅನೇಕ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ ಎಂದರು.

ಅಧಿಕಾರ ದಾಹದಿಂದಾಗಿ ಬಿಜೆಪಿಯವರು, ಶಾಸಕರನ್ನು ಖರೀದಿಸಿ, ಉತ್ತಮವಾಗಿ ಸಾಗುತ್ತಿದ್ದ ರಾಜ್ಯದ ಮೈತ್ರಿ ಸರ್ಕಾರವನ್ನು ಕೆಡವಿದರು. ಆ ಮೂಲಕ, ರಾಜ್ಯವನ್ನು ಕುದುರೆ ವ್ಯಾಪಾರಕ್ಕೆ ಮಾದರಿಯಾಗಿಸಿದರು. ಅದರ ಪ್ರತಿಫಲವನ್ನು ಉಪ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಲಿದೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಭೀಕರ ಪ್ರವಾಹ ಸ್ಥಿತಿಯನ್ನು ನಿಭಾಯಿಸುವಲ್ಲಿ ಹಾಗೂ ಸಂತ್ರಸ್ತರ ಕಣ್ಣೊರೆಸುವಲ್ಲಿ ಬಿಜೆಪಿ ಸೋತಿದೆ. ಏಳು ಲಕ್ಷ ಸಂತ್ರಸ್ತರು ಇನ್ನೂ ಪರಿಹಾರ ಕೇಂದ್ರಗಳಲ್ಲೇ ಇದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ, ಇಲ್ಲಿನ ಪ್ರವಾಹ ಸಮಸ್ಯೆ ಬಗ್ಗೆ ಪ್ರಧಾನಿ ಕಿಂಚಿತ್ತೂ ಸಹಾನುಭೂತಿ ತೋರಲಿಲ್ಲ ಎಂದು ಟೀಕಿಸಿದರು.

ಒಗ್ಗಟ್ಟಾಗಿದ್ದೇವೆ:ರಾಜ್ಯ ಕಾಂಗ್ರೆಸ್‌ನಲ್ಲಿ ಯಾರೂ ಒಬ್ಬಂಟಿಯಾಗಿಲ್ಲ. ಎಲ್ಲರೂ ಅವರವರಿಗೆ ವಹಿಸಿದ ಕೆಲಸಗಳನ್ನು ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು, ಮಹಾರಾಷ್ಟ್ರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ವೀರಪ್ಪ ಮೋಯಿಲಿ, ಮುನಿಯಪ್ಪ ಅವರು ಉಪಚುನಾವಣೆ ಪ್ರಚಾರದಲ್ಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.‌ಶಿವಕುಮಾರ್ ಕಾಲಿಗೆ ಚಕ್ರ ಕಟ್ಟಿಕೊಂಡು ಚುನಾವಣೆ ಪ್ರಚಾರದಲ್ಲಿ ಓಡಾಡುತ್ತಿದ್ದಾರೆ.‌ ಹೀಗಿರುವಾಗ ನಮ್ಮ ಮಧ್ಯೆ ಒಡಕು ಮೂಡಲು ಹೇಗೆ ಸಾಧ್ಯ? ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು, ವಹಿಸಿರುವ ಕೆಲಸವನ್ನು ನಾವೆಲ್ಲರೂ ಮಾಡುತ್ತಿದ್ದೇವೆ ಎಂದು ಪ್ರಶ್ನಿಸಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಸೋತರೆ ರಾಜೀನಾಮೆ ನೀಡುವುದಾಗಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ. ಅವರು, ಹಿಂದೆ‌ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ, ಒಮ್ಮೆಯೂ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. ಹಾಗಾಗಿ, ಅವರನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.